ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ದಂಪತಿಯು ಹೊಸ ಮನೆಗೆ ಹೋಗುವ ಖುಷಿಯಲ್ಲಿದ್ದಾರೆ. ಈ ಮಧ್ಯೆ, ಅವರಿಬ್ಬರೂ ಎರಡನೆಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿಯೊಂದು ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಕೇಳಿ ಬರುತ್ತಿದೆ.
ಹೌದು, ಸೈಫೀನಾ ಇದೀಗ ಎರಡನೆಯ ಮಗುವಿನ ನಿರೀಕ್ಷೆಯಲ್ಲಿದ್ದು, ಈಗಾಗಲೇ ಈ ವಿಷಯವನ್ನು ತಮ್ಮ ಆಪ್ತವಲಯಕ್ಕೆ ತಿಳಿಸಿದ್ದಾರಂತೆ. ಇದುವರೆಗೂ ಆಪ್ತವಲಯದಲ್ಲಿದ್ದ ಈ ಸುದ್ದಿ, ಇದೀಗ ನಿಧಾನಕ್ಕೆ ಲೀಕ್ ಆಗುತ್ತಿದೆ ಎಂದು ಹೇಳಲಾಗುತ್ತಿದೆ.
'ತಶನ್' ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ ಸೈಫ್ ಅಲಿ ಖಾನ್ ಮತ್ತು ಕರೀನಾ ನಡುವೆ ಪ್ರೇಮಾಂಕುರವಾಗಿತ್ತು. ಅವರ ನಡುವೆ 10 ವರ್ಷಗಳ ಅಂತರವಿದ್ದು, ಈ ಮದುವೆ ಹೆಚ್ಚು ಕಾಲ ಬಾಳುತ್ತದಾ ಎಂಬುದು ಹಲವರ ಪ್ರಶ್ನೆಯಾಗಿತ್ತು. ಮೇಲಾಗಿ ಇದು ಸೈಫ್ ಅವರ ಎರಡನೆಯ ಮದುವೆ. ಇದಕ್ಕೂ ಮುನ್ನ ಅವರು ನಟಿ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದು, ಮಗಳು ಸಾರಾ ಅಲಿ ಖಾನ್ ಸಹ ಈಗ ಚಿತ್ರನಟಿಯಾಗಿದ್ದಾಳೆ.
ಹೀಗೆ 2012ರಲ್ಲಿ ಮದುವೆಯಾದ ಸೈಫ್ ಮತ್ತು ಕರೀನಾ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. 2016ರಲ್ಲಿ ತೈಮುರ್ಗೆ ಜನ್ಮ ನೀಡಿದ ಕರೀನಾ, ಸಂದರ್ಶನವೊಂದರಲ್ಲಿ ಇನ್ನೊಂದು ಮಗು ಬೇಕು ಎಂದು ಹೇಳಿದ್ದರು. ತೈಮುರ್ ಸ್ವಲ್ಪ ದೊಡ್ಡವನಾದ ಮೇಲೆ ಇನ್ನೊಂದು ಮಗುವಿನ ತಾಯಿಯಾಗುವುದಕ್ಕೆ ಬಯಸುತ್ತಿರುವುದಾಗಿ ಅವರು ಹೇಳಿದ್ದರು.
ಅದರಂತೆ, ಇದೀಗ ತೈಮುರ್ಗೆ ನಾಲ್ಕು ವರ್ಷ ತುಂಬಿದ್ದು, ಈ ಸಂದರ್ಭದಲ್ಲಿ ಸೈಫ್ ಮತ್ತು ಕರೀನಾ, ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗಿದೆ.
ಸದ್ಯ, 'ತಖ್ತ್' ಮತ್ತು 'ಲಾಲ್ ಸಿಂಗ್ ಛಡ್ಡಾ' ಚಿತ್ರಗಳಲ್ಲಿ ಕರೀನಾ ನಟಿಸುತ್ತಿದ್ದು, ಎರಡೂ ಚಿತ್ರಗಳ ಚಿತ್ರೀಕರಣ ಕರೊನಾ ಹಾವಳಿಯಿಂದ ನಿಂತಿವೆ. 'ತಖ್ತ್' ಚಿತ್ರದ ಚಿತ್ರೀಕರಣ ಮುಂದಿನ ವರ್ಷಕ್ಕೆ ಹೋಗಿದ್ದು, 'ಲಾಲ್ ಸಿಂಗ್ ಛಡ್ಡಾ' ಚಿತ್ರದ ಚಿತ್ರೀಕರಣ ಅಕ್ಟೋಬರ್ನಿಂದ ಪ್ರಾರಂಭವಾಗುವ ಸಾಧ್ಯತೆ ಇದೆ.