"ಧುರಂಧರ್' ಸರಣಿಯ ಸೂಪರ್ ಸಕ್ಸಸ್, "ರಾಜೀ', "ಖೂಫಿಯಾ', "ಮಿಷನ್ ಮಜ್ನೂ' ಚಿತ್ರಗಳ ಜತೆಗೆ "ಮುಖ್ಬೀರ್: ದ ಸ್ಟೋರಿ ಆಫ್ ಎ ಸ್ಪೈ'ನಂತಹ ಗೂಢಚಾರರ ಕುರಿತ ವೆಬ್ಸರಣಿಗಳ ಯಶಸ್ಸು, ಚಿತ್ರತಂಡಗಳು ಸ್ಪೈ ಸಿನಿಮಾಗಳ ಬಗ್ಗೆ ಗಮನ ಹರಿಸುವಂತೆ ಮಾಡಿದೆ. ಈಗಾಗಲೇ ರಾ (ರೀಸರ್ಚ್ ಆ್ಯಂಡ್ ಅನಾಲಿಸಿ ವಿಂಗ್) ಏಜೆಂಟ್ ರವೀಂದ್ರ ಕೌಶಿಕ್ ಜೀವನಾಧಾರಿತ "ದ ಬ್ಲ್ಯಾಕ್ ಟೈಗರ್' ಚಿತ್ರ ಘೋಷಣೆಯಾಗಿದ್ದು, ಇದೀಗ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಇನ್ನೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಸೋಮವಾರ (ಸೆ. 21) ಭಾರತದ ಗುಪ್ತಚರ ದಳ ರಾ ಸ್ಥಾಪನೆಯಾಗಿ (1968 ಸೆ. 21) 58 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಅದರ ರೂವಾರಿ ರಾಮೇಶ್ವರ್ ನಾಥ್ ಕಾವ್ ಬಯೋಪಿಕ್ ಘೋಷಿಸಲಾಗಿದೆ.
ಲೇಖಕ ನಿತಿನ್ ಗೋಖಲೆ ಅವರ "ಆರ್.ಎನ್. ಕಾವ್: ಜೆಂಟಲ್ಮ್ಯಾನ್ ಸ್ಪೈಮಾಸ್ಟರ್' ಪುಸ್ತಕವನ್ನು ಆಧರಿಸಿ ಈ ಸಿನಿಮಾ ಮೂಡಿಬರಲಿದೆ. ಅವರ ಬಾಲ್ಯ, ಸ್ವಾತಂತ್ರ್ಯಪೂರ್ವ ಪೊಲೀಸ್ ಸೇವೆ, ನಂತರ ಗೂಢಚಾರಿಕೆ, ರಾ ಸ್ಥಾಪನೆ, ಅದರ ಮೂಲಕ ಮಾಡಿದ ಕೆಲಸಗಳ ಸುತ್ತ ಕಥೆ ಸಾಗುತ್ತದೆ. 2020ರಲ್ಲೇ ಕರಣ್ ಜೋಹರ್ ಈ ಸಿನಿಮಾ ಘೋಷಿಸಿದ್ದರಾದರೂ, ಕಾರಣಾಂತರಗಳಿಂದ ಸೆಟ್ಟೇರಿರಲಿಲ್ಲ. ಈ ಬಾರಿ ಅವರು ರಿಲೀಸ್ ದಿನಾಂಕವನ್ನೂ ಘೋಷಿಸಿದ್ದು, 2028ರ ಆ. 11ರಂದು ಬಿಡುಗಡೆ ಎಂದು ಮಾಹಿತಿ ನೀಡಿದ್ದಾರೆ. ಇದಲ್ಲದೇ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಜನ್ಸಲ್ ಮೆಹ್ತಾ ಕೂಡ 2022ರಲ್ಲಿ ಕಾವ್ ಕುರಿತ "ಮಿಷನ್ ರಾ' ವೆಬ್ಸರಣಿ ಘೋಷಿಸಿದ್ದರು.
ಭಾರತ ಮಾತ್ರವಲ್ಲದೇ ದಕ್ಷಿಣ ಏಷ್ಯಾದ ಟಾಪ್ ಸ್ಪೈಗಳಲ್ಲಿ ಆರ್.ಎನ್.ಕಾವ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. 1968ರಲ್ಲಿ ರಾ (ರೀಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್) ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು 1977ರವರೆಗೆ ಒಂಬತ್ತು ವರ್ಷಗಳ ಕಾಲ ಅದನ್ನು ಮುನ್ನಡೆಸಿದರು. 1962ರಲ್ಲಿ ಚೀನಾ ಹಾಗೂ 1965ರಲ್ಲಿ ಪಾಕಿಸ್ತಾನ, ಭಾರತದ ಮೇಲೆ ಯದ್ಧ ಸಾರಿದ ಕಾರಣ ಸಾಕಷ್ಟು ಸಾವು&ನೋವುಗಳು ಸಂಭವಿಸಿದ್ದವು. ಹೀಗಾಗಿ ಗುಪ್ತಚರ ದಳದ ಅನಿವಾರ್ಯತೆ ಅರಿತು ಕಾವ್, ರಾ ಸ್ಥಾಪಿಸಿದರು. ಅದಾಗಿ ಮೂರೇ ವರ್ಷಗಳಲ್ಲಿ ಬಾಂಗ್ಲಾದೇಶಕ್ಕೆ ಪಾಕಿಸ್ತಾನದಿಂದ ಸ್ವಾತಂತ್ರ್ಯ ನೀಡುವಲ್ಲಿ ಭಾರತೀಯ ಗುಪ್ತಚರ ದಳ ಪ್ರಮುಖ ಪಾತ್ರ ವಹಿಸಿತ್ತು. ಹಾಗೇ 1975ರಲ್ಲಿ ಸಿಕ್ಕಿಂಅನ್ನು 22ನೇ ರಾಜ್ಯವಾಗಿ ಭಾರತಕ್ಕೆ ಸೇರಿಸಿಕೊಳ್ಳುವಲ್ಲೂ ಕಾವ್ ಭೂಮಿಕೆಯಿತ್ತು. ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ಅ್ಘಾನಿಸ್ತಾನ, ಶ್ರೀಲಂಕಾ ಸೇರಿ ಏಷಿಯಾ ದೇಶಗಳಲ್ಲಿ ತಮ್ಮದೇ ಸಂಪರ್ಕ ಹೊಂದಿದ್ದ ಕಾವ್ ಎಂದರೆ ಅಮೆರಿಕ, ಯೂರೋಪ್ ಗುಪ್ತಚರ ದಳಗಳಿಗೂ ವಿಶೇಷ ಗೌರವವಿತ್ತು ಎನ್ನಲಾಗಿದೆ.