ಸಿನಿವಾಣಿ

'ಕಾಂತಾರ' ಮತ್ತೊಂದು ದಾಖಲೆ; ಹೊಂಬಾಳೆ ಫಿಲ್ಮ್ಸ್​ಗೆ ಇದು ಸಂಭ್ರಮದ ಸಂಗತಿ..

ಬೆಂಗಳೂರು: ಬಿಡುಗಡೆ ಆಗಿ ಮೂರು ವಾರ ಕಳೆದರೂ ಭರ್ಜರಿ ಪ್ರದರ್ಶನ ಕಾಣುತ್ತಿರುವ 'ಕಾಂತಾರ' ಸಿನಿಮಾ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲೂ ದಾಖಲೆಗಳನ್ನು ಮಾಡಿದೆ. ಇದೀಗ ಇದು ಇನ್ನೊಂದು ಹೆಗ್ಗಳಿಕೆಗೂ ಪಾತ್ರವಾಗಿದ್ದು, ಹೊಂಬಾಳೆ ಫಿಲ್ಮ್ಸ್​​ಗೆ ಇಂದು ಸಂಭ್ರಮದ ಸಂಗತಿ ಎನಿಸಿಕೊಂಡಿದೆ.

ಕಾಂತಾರದ ಮತ್ತೊಂದು ಹೆಗ್ಗಳಿಕೆಗೆ ಕುರಿತು ನಿರ್ಮಾಪಕ ವಿಜಯ್ ಕಿರಗಂದೂರು ಮಾಹಿತಿ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. 'ಈವರೆಗೆ ಹೊಂಬಾಳೆ ಫಿಲ್ಮ್ಸ್​​ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದ್ದು, ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿದೆ' ಎಂಬುದಾಗಿಯೂ ಅವರು ಹೇಳಿಕೊಂಡಿದ್ದಾರೆ.

ಇದಕ್ಕೂ ಮೊದಲು ಕಾಂತಾರ ಐಎಂಡಿಬಿಯಲ್ಲಿ ಅತ್ಯಧಿಕ ರೇಟಿಂಗ್ ಪಡೆದ ಭಾರತೀಯ ಸಿನಿಮಾ ಆಗಿ ದಾಖಲೆ ಮಾಡಿತ್ತು. ಅಲ್ಲದೆ ಡಬ್ಬಿಂಗ್ ಆಗದೇ ನೇರವಾಗಿ ಮುಂಬೈನಲ್ಲಿ ಬಿಡುಗಡೆಯಾದ ಮೊದಲ ದಕ್ಷಿಣ ಭಾರತೀಯ ಸಿನಿಮಾ ಮತ್ತು ಮುಂಬೈನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಕಂಡ ಮೊದಲ ಕನ್ನಡ ಸಿನಿಮಾ ಎಂಬ ದಾಖಲೆಗೂ ಪಾತ್ರವಾಗಿತ್ತು.