ಕಲಾ ಬಳಗ ಹಾಗೂ ಪೌರಾಣಿಕ ಕಥೆಯ ಕಾರಣಕ್ಕಾಗಿ ಮೊದಲಿನಿಂದಲೂ ನಿರೀಕ್ಷೆ ಮೂಡಿಸಿರುವ ಪ್ಯಾನ್ ಇಂಡಿಯಾ ಚಿತ್ರ ‘ಕಣ್ಣಪ್ಪ’. ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ವಿಷ್ಣು ಮಂಚು ಮುಖ್ಯಭೂಮಿಕೆಯಲ್ಲಿದ್ದು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಕಾಜಲ್ ಅಗರ್ವಾಲ್, ಮೋಹನ್ ಬಾಬು ಸೇರಿ ಹಲವರು ತಾರಾಗಣದಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಕೆಲ ತಿಂಗಳ ಹಿಂದೆ ಏ. 25ರಂದು ರಿಲೀಸ್ ಮಾಡುವುದಾಗಿ ಘೋಷಿಸಿತ್ತು. ಆದರೆ, ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳು ವಿಳಂಬವಾಗಿದೆ. ಇದೊಂದು ಪೌರಾಣಿಕ ಕಥೆಯಾಗಿದ್ದು, ತಾಂತ್ರಿಕವಾಗಿ ಚೆನ್ನಾಗಿ ಮೂಡಿಬರಬೇಕಿದೆ. ಈ ಹಿನ್ನೆಲೆಯಲ್ಲಿ ಚಿತ್ರವನ್ನು ಮತ್ತಷ್ಟು ಸಶಕ್ತವಾಗಿ ತೆರೆ ಮೇಲೆ ತರಲು ಚಿತ್ರತಂಡ ಉದ್ದೇಶಿಸಿದೆ. ಹಾಗೆಯೇ ದೇಶಾದ್ಯಂತ ಪ್ರಚಾರ ಮಾಡುವ ಹುಮ್ಮಸ್ಸಿನಲ್ಲಿದೆ. ಈ ಕಾರಣಕ್ಕಾಗಿ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಿದ್ದು, ಜೂನ್ 27ಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇತ್ತೀಚೆಗಷ್ಟೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಚಿತ್ರತಂಡ ಭೇಟಿ ಮಾಡಿದ್ದು, ಅವರಿಂದ ನೂತನ ರಿಲೀಸ್ ಡೇಟ್ ಅನೌನ್ಸ್ ಮಾಡಿಸಿದೆ. -ಏಜೆನ್ಸೀಸ್