ಸಿನಿವಾಣಿ

ಕನ್ನಡಿಗರೇ ನನ್ನ ಮರಿಬೇಡ್ರಪ್ಪೋ! ಆಂಕರ್ ಅನುಶ್ರಿಗೆ ಶುರುವಾಗಿದೆ ಭಯ..

ಮಾತಿನಲ್ಲಿ ಪಟಾಕಿ ಸಿಡಿಸುತ್ತ ಕರುನಾಡಿನ ಜನರ ಹೃದಯ ಗೆದ್ದಿರುವ ನಿರೂಪಕಿ ಅನುಶ್ರೀ, ಕರೊನಾ ಲಾಕ್​ಡೌನ್​ನಿಂದಾಗಿ ಮನೆಯಲ್ಲಿಯೇ ಲಾಕ್ ಆಗಿದ್ದಾರೆ. ಸುದೀರ್ಘ ಎರಡು ತಿಂಗಳು ನಿರೂಪಣೆ ಬದಿಗಿಟ್ಟು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಅವರಿಗೆ ಹೊಸ ಭಯವೊಂದು ಕಾಡುತ್ತಿದೆಯಂತೆ. ಮಲಗಲೂ ಅದು ಬಿಡುತ್ತಿಲ್ಲವಂತೆ!

| ಮಂಜು ಕೊಟಗುಣಸಿ  ಬೆಂಗಳೂರು: ಕ್ಯಾಮರಾ ಇಲ್ಲ.. ಮೇಕಪ್ ಇಲ್ಲ.. ಆಕ್ಷನ್ ಅನ್ನೋ ಮಾತು ಕೇಳಿಸಿಕೊಂಡೇ ತಿಂಗಳುಗಳು ಕಳೆದವು. ಇದೆಲ್ಲವನ್ನು ನೋಡುತ್ತಿದ್ದರೆ, ಆಂಕರ್ ಅನುಶ್ರೀಗೆ ದಿನೇದಿನೆ ಭಯ ಹೆಚ್ಚಾಗುತ್ತಿದೆಯಂತೆ. ‘ಎಲ್ಲಿ ಕರುನಾಡ ಜನ ನನ್ನನ್ನು ಮರೆತು ಬಿಡುತ್ತಾರೋ’ ಎಂಬ ಆತಂಕದಲ್ಲಿದ್ದಾರಂತೆ.

ಕಳೆದ ಎರಡು ತಿಂಗಳಿಂದ ಎಲ್ಲ ಮನರಂಜನಾ ವಾಹಿನಿಗಳಲ್ಲಿ ಹಳೇ ಏಪಿಸೋಡ್​ಗಳೇ ಪ್ರಸಾರವಾಗುತ್ತಿವೆ. ಇನ್ನೇನು ನಾಳೆಯಿಂದ ಹೊಸ ಸಂಚಿಕೆಗಳು ಬದಲಾದ ರೂಪ ಪಡೆದುಕೊಂಡು ಶುರುವಾಗಲಿವೆ. ಇತ್ತ ರಿಯಾಲಿಟಿ ಶೋಗಳ ಮರುಪ್ರಸಾರ ಚಾಲ್ತಿಯಲ್ಲಿದೆಯಾದರೂ, ಹೊಸ ಏಪಿಸೋಡ್​ಗಳ ಚಿತ್ರೀಕರಣಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ಈ ಪರಿಸ್ಥಿತಿಯನ್ನು ಕಂಡು ಆಂಕರ್ ಅನುಶ್ರೀ ಮಂಕಾಗಿದ್ದಾರೆ. ಅದ್ಯಾವ ಮಟ್ಟಿಗೆ ಅಂದರೆ, ರಾತ್ರಿ ನಿದ್ರೆಯಲ್ಲೂ ಅವರು ಭಯಪಡುತ್ತಿದ್ದಾರೆ.

‘ಲಾಕ್​ಡೌನ್ ಶುರುವಾದ ಮೇಲೆ ಕೆಲಸವೂ ನಿಂತು ಹೋಗಿದೆ. ದಿನದ 24 ಗಂಟೆಯಲ್ಲಿ ಬಹುಪಾಲು ಸೆಟ್​ನಲ್ಲಿಯೇ ಕಳೆಯುತ್ತಿದ್ದ ನಾನು ಸದ್ಯ ಮನೆಯಲ್ಲಿದ್ದೇನೆ. ಇದರಿಂದಾಗಿ ಎಲ್ಲಿ ನನ್ನ ನಿರೂಪಣಾ ಶೈಲಿ ಮರೆತು ಹೋಗುತ್ತೋ? ಕನ್ನಡಿಗರು ಎಲ್ಲಿ ನನ್ನನ್ನು ಮರೆತು ಬಿಡ್ತಾರೋ ಎಂಬ ಭಯ ಕಾಡುತ್ತಿದೆ. ದಿಢೀರನೆ ರಾತ್ರಿ ಎಚ್ಚರ ಆಗಿ, ಜನ ನನ್ನ ಮರೆತರೆ ಹೆಂಗೆ! ಅಂತ ಅನಿಸಿದ್ದು ಉಂಟು’ ಎನ್ನುವ ಅನುಶ್ರೀಗೆ ಇಲ್ಲಿಯವರೆಗೂ ಇಷ್ಟೊಂದು ಪ್ರಮಾಣದ ಗ್ಯಾಪ್ ಸಿಕ್ಕೇ ಇಲ್ಲವಂತೆ. ಹಾಗಾಗಿ ಶೂಟಿಂಗ್ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಈ ಲಾಕ್​ಡೌನ್ ನನಗೆ ಹೊಸದೇನಲ್ಲ!: ಶೂಟಿಂಗ್ ಜತೆಯಲ್ಲಿ ಒಂದಷ್ಟು ಸುತ್ತಾಟ, ಮಾಲ್, ಶಾಪಿಂಗ್ ಸಹಜ. ಆದರೆ, ಅದ್ಯಾವುದು ಅನುಶ್ರೀಗೆ ಇಷ್ಟವಿಲ್ಲವಂತೆ. ಚೂರು ಬಿಡುವು ಸಿಕ್ಕರೂ ಮನೆಯಲ್ಲಿ ಕುಟುಂಬದೊಟ್ಟಿಗೆ ಕಾಲ ಕಳೆಯುತ್ತಾರಂತೆ. ‘ನನಗೆ ಲಾಕ್​ಡೌನ್ ಹೊಸದೇನಲ್ಲ. ಶೂಟಿಂಗ್ ಇಲ್ಲದಿದ್ದರೆ ಮನೆಯಲ್ಲಿಯೇ ಪೂರ್ತಿ ದಿನ ನನ್ನ ಠಿಕಾಣಿ. ಈ ಶಾಪಿಂಗ್, ಸುತ್ತಾಟ, ಪಾರ್ಟಿ.. ಅದ್ಯಾವುದು ಆಗಿ ಬರಲ್ಲ. ಹಾಗಾಗಿ ಈ ಲಾಕ್​ಡೌನ್ ನನಗೆ ಹೊಸತು ಅನಿಸುವುದಿಲ್ಲ. ಅಂದು ನಮಗೆ ಅನಿಸಿದಾಗಲೆಲ್ಲ ಹೊರಹೋಗಬಹುದಿತ್ತು. ಈಗ ಆ ಅವಕಾಶ ಇಲ್ಲ ಅಷ್ಟೇ’ ಎಂಬುದು ಅವರ ಮಾತು.

ಬೆಳಗೆರೆ ‘ಮಾಟಗಾತಿ’ ಮೋಡಿಮಾಡುತ್ತಿದೆ...: ಕಳೆದ 60 ದಿನಗಳಲ್ಲಿ ಅನುಶ್ರೀ ಹೊಸದೇನನ್ನಾದರೂ ಕಲಿತಿದ್ದಾರೆ ಎಂದರೆ ಅದು ಪುಸ್ತಕ ಓದುವುದು ಎಂದು ಅವರೇ ಹೇಳಿಕೊಳ್ಳುತ್ತಾರೆ. ಶೂಟಿಂಗ್ ಸಮಯದಲ್ಲಿ ಅಮ್ಮ ಸಾಕಷ್ಟು ಪುಸ್ತಕ ನೀಡಿದ್ದರೂ, ಆಗ ಅದ್ಯಾವುದನ್ನೂ ಮುಟ್ಟದ ಅವರು, ಈಗ ಓದುವಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ನಿರೂಪಕಿಯಾದವಳು ಓದಬೇಕು. ಆದರೆ ನಾನು ಮಾತ್ರ ಓದುತ್ತಿರಲಿಲ್ಲ. ಇದೀಗ ಅದರ ರುಚಿ ಹತ್ತಿದೆ. ರವಿ ಬೆಳಗೆರೆ ಅವರ ‘ಮಾಟಗಾತಿ’ ಓದುತ್ತಿದ್ದೇನೆ. ಅಮ್ಮ, ಎಸ್.ಎಲ್ ಭೈರಪ್ಪನವರ ‘ನಾಯಿ ನೆರಳು’ ಕಾದಂಬರಿ ನೀಡಿದ್ದಾಳೆ. ಶೂಟಿಂಗ್ ನಡುವೆಯೂ ಓದು ಮುಂದುವರಿಯುತ್ತದೆ’ ಎನ್ನುತ್ತಾರೆ.

ಜೀವನವೇ ಬದಲಾಗಿದೆ: ಇನ್ನು ಈ ಲಾಕ್​ಡೌನ್ ಗ್ಯಾಪ್​ನಲ್ಲೇ ಒಂದು ಹಾಡನ್ನು ನಿರ್ವಿುಸಿ ಬಿಡುಗಡೆ ಮಾಡಿದ್ದಾರೆ ಅನುಶ್ರೀ. ‘ಜೀವನ ಬದಲಾಗಿದೆ ...’ ಶೀರ್ಷಿಕೆಯ ಆ ಗೀತೆಯಲ್ಲಿ ಪ್ರಸ್ತುತತೆಯ ವಿಷಯವನ್ನು ಅಳವಡಿಸಿದ್ದಾರೆ. ಆ ಹಾಡು ಸೃಷ್ಟಿಯ ಹಿನ್ನೆಲೆಯನ್ನು ಅವರೇ ಹೇಳಿಕೊಂಡಿದ್ದಾರೆ. ‘ಇನ್​ಸ್ಟಾಗ್ರಾಮ್ೆ ಒಂದು ಪೋಸ್ಟ್ ಹಾಕಲು ಸ್ನೇಹಿತ ನಾಗೇಂದ್ರ ಬಳಿ ಒಂದಷ್ಟು ಸಾಲುಗಳನ್ನು ಬರೆದುಕೊಡುವಂತೆ ಕೇಳಿದ್ದೆ. ಅವರು ಬರೆದುಕೊಟ್ಟ ಆ ಸಾಲುಗಳು ಹಾಡನ್ನು ಸೃಷ್ಟಿಸುವಂತೆ ಮಾಡಿತು. ಮನೆ ಪಕ್ಕದಲ್ಲಿಯೇ ಎರಡು ಗಂಟೆಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ವಿಜೀತ್ ಸಂಗೀತ ಕೊಟ್ಟರೆ, ವಾಸುಕಿ ಛಾಯಾಗ್ರಹಣ ಮಾಡಿದ್ದಾರೆ. ನಿರಂಜನ್ ನೀಟಾಗಿ ಎಡಿಟಿಂಗ್ ಮಾಡಿಕೊಟ್ಟಿದ್ದಾರೆ . ಕರೊನಾ ಹಿನ್ನಲೆಯಲ್ಲಿ ಏನೆಲ್ಲ ಬದಲಾವಣೆ ಆಯಿತು ಎಂಬುದನ್ನು ಇದರಲ್ಲಿ ಹೇಳಿದ್ದೇವೆ’ ಎಂದು ವಿವರಿಸುತ್ತಾರೆ.