Yash Radhika Pandit Alibaug property
- ಮುಂಬೈನಲ್ಲಿ ಐಷಾರಾಮಿ ಆಸ್ತಿ ಖರೀದಿ ಮಾಡಿದ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್
- ದಿಗ್ಗಜ ಸೆಲಬ್ರೆಟಿಗಳ ಬಂಗಲೆ ಇರುವ ಪ್ರದೇಶದಲ್ಲೇ ಸ್ಯಾಂಡಲ್ವುಡ್ ನಟ-ನಟಿ ಹೂಡಿಕೆ
- ಸಮುದ್ರದ ಕಿನಾರೆಯಲ್ಲಿ ಪ್ರಾಪರ್ಟಿ ಖರೀದಿಸಿದ ಯಶ್ ಮತ್ತು ರಾಧಿಕಾ ಪಂಡಿತ್
Yash Radhika Pandit Alibaug property: ಕನ್ನಡದ ಸೂಪರ್ ಜೋಡಿ ಎನಿಸಿಕೊಂಡಿರುವ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಈಗ ಪ್ರಾಪರ್ಟಿ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಟಾಕ್ಸಿಕ್ ಸಿನಿಮಾ ರಿಲೀಸ್ಗೆ ಇನ್ನೂ ಕೆಲವೇ ತಿಂಗಳು ಬಾಕಿ ಇರುವ ಹೊತ್ತಲ್ಲೇ ಕರಾವಳಿ ಭಾಗವಾದ ಅಲಿಭಾಗ್ನಲ್ಲಿ 24 ಕೋಟಿ ಮೌಲ್ಯದ ಸೈಟ್ ಖರೀದಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಕರಾವಳಿ ಭಾಗದಲ್ಲಿ ಸೈಟ್ ಖರೀದಿ
ಅಲಿಬಾಗ್‌ನ ರಾಯಗಡ ಜಿಲ್ಲೆಯ ಕಾಮತ್ ಗ್ರಾಮದಲ್ಲಿರುವ ಕಿಹಿಮ್ ಬೀಚ್ ಬಳಿಯ ಕೃಷಿ ಭೂಮಿಯನ್ನು ಯಶ್ ದಂಪತಿ 24 ಕೋಟಿ ರೂ ಕೊಟ್ಟು ಖರೀದಿ ಮಾಡಿದ್ದಾರೆ. ಇದು ಮಹಾರಾಷ್ಟ್ರದ ಜನಪ್ರಿಯ ಪ್ರವಾಸಿ ತಾಣ. ಅಲ್ಲದೆ ಬಾಲಿವುಡ್ ನಟ, ನಟಿಯರು, ಕ್ರಿಕೆಟಿಗರು ಇಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.
ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ಸ್ ಖರೀದಿಸಿದ ಕೃಷಿ ಭೂಮಿಗೆ 1.44 ಕೋಟಿ ಸ್ಟಾಂಪ್ ಡ್ಯೂಟಿ ಹಾಗೂ 60 ಸಾವಿರ ನೋಂದಣಿ ಶುಲ್ಕ ಪಾವತಿ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಈ ವಹಿವಾಟನ್ನು 2026 ಮೇ18ರಂದು ಅಲಿಬಾಗ್‌ನಲ್ಲಿರುವ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಅಧಿಕೃತವಾಗಿ ನೋಂದಾಯಿಸಲಾಗಿದೆ ಎನ್ನಲಾಗಿದೆ.
ಎಷ್ಟಿದೆ ಸೈಟ್ ವಿಸ್ತೀರ್ಣ
ಎರಡು ಕೃಷಿ ಭೂಮಿಯ ಒಟ್ಟು ವಿಸ್ತೀರ್ಣ ಸುಮಾರು 5,289 ಚದರ ಮೀಟರ್ ಇದ್ದು, ಇದರ ಜೊತೆಗೆ ಒಂದು ಮನೆ ಕೂಡ ಸೇರಿದೆ ಎಂದು ವರದಿಯಾಗಿದೆ. ಈ ಜಮೀನನ್ನು ಸೆಕ್ಷನ್7ರಡಿ ಕೃಷಿ ಭೂಮಿ ಎಂದು ನೋಂದಾಯಿಸಲಾಗಿದೆ ಎಂದು ವರದಿ ಮಾಡಲಾಗಿದೆ.
ಬಾಲಿವುಡ್ ನಟರ ನೆಚ್ಚಿನ ತಾಣ
ಅಲಿಬಾಗ್ ಮುಂಬೈಗೆ ಸಮೀಪ ಹಾಗೂ ಸುಂದರ ತಾಣವಾಗಿರುವ ಕಾರಣ ಹಲವಾರು ಬಾಲಿವುಡ್ ನಟ ನಟಿಯರು ಇಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಅಮಿತಾಬ್ ಬಚ್ಚನ್, ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಕೃತಿ ಸನೂನ್, ಕಾರ್ತಿಕ್ ಆರ್ಯನ್ ಕೊಹ್ಲಿ ಸೇರಿದಂತೆ ಹಲವರು ಹೂಡಿಕೆ ಮಾಡಿದ್ದಾರೆ. ಈಗ ಆ ಸಾಲಿನಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಸೇರಿದ್ದಾರೆ.
ಯಶ್-ರಾಧಿಕಾ ವೈವಾಹಿಕ ಜೀವನ
ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಹೆಚ್ಚಾಗಿ ಪರಿಚಿತರಾದ ನಟ ಯಶ್ ಮತ್ತು ರಾಧಿಕಾ ಪಂಡಿತ್, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾ ನಂತರ ಕ್ಯೂಟೆಸ್ಟ್ ಜೋಡಿಗಳಾದರು. ಪ್ರೇಮಿಗಳು ಹೀಗಿರಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ನಂತರ, ಇಬ್ಬರು ಒಟ್ಟಾಗಿ ಮದುವೆಯಾಗಲಿದ್ದಾರೆ ಎನ್ನುವ ಗುಸುಗುಸು ಕೇಳಿ ಬಂದಿತ್ತು. ಕೊನೆಗೆ 2016ರಲ್ಲಿ ಹಸೆಮಣೆ ಏರಿದರು. ಸದ್ಯ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೆ, ರಾಧಿಕಾ ಪಂಡಿತ್ ಅವರು ಮಕ್ಕಳ ಆರೈಕೆಯಲ್ಲಿ ತಲ್ಲೀನರಾಗಿದ್ದಾರೆ.