ಸಿನಿವಾಣಿ

ಇಂದಿನಿಂದ ಬಿಗ್​ಬಾಸ್ 8 ಶುರು

ಬೆಂಗಳೂರು: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ವಾದ ‘ಬಿಗ್​ಬಾಸ್’ನ ಎಂಟನೇ ಸೀಸನ್ ಇಂದು ಸಂಜೆ ಆರಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಾರಂಭವಾಗಲಿದೆ.

ಕಾರ್ಯಕ್ರಮದಲ್ಲಿ 11 ಸ್ಪರ್ಧಿಗಳು ಭಾಗವಹಿಸಲಿದ್ದು, ಯಾರೆಲ್ಲ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ ಎಂಬ ಕುತೂಹಲ ತೀವ್ರವಾಗಿದ್ದು, ಇಂದು ಸಂಜೆ ಬಯಲಾಗಲಿದೆ. ಕಳೆದ ವರ್ಷದಂತೆ ಒಟ್ಟು 17 ಮಂದಿ ಸೆಲೆಬ್ರಿಟಿ ಮತ್ತು ಸೆಮಿ-ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿದ್ದಾರೆ.

100 ದಿನಗಳ ಈ ಆಟದ ವಿಶೇಷತೆಯೆಂದರೆ, ಇದೇ ಮೊದಲ ಬಾರಿಗೆ ರಾಜಕಾರಣಿಯೊಬ್ಬರು ಭಾಗವಹಿಸುತ್ತಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಎಲ್ಲ ಸ್ಪರ್ಧಿಗಳು ಈಗಾಗಲೇ ಕ್ವಾರಂಟೈನ್​ನಲ್ಲಿದ್ದಾರೆ. ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿಸಿ ಮನೆಯೊಳಗೆ ಬಿಡಲಾಗುತ್ತಿದೆ.

ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ರಾತ್ರಿ 9.30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದ್ದು, ಶನಿವಾರ ಮತ್ತು ಭಾನುವಾರ ರಾತ್ರಿಗಳಂದು ಪ್ರಸಾರವಾಗುವ ವಿಶೇಷ ಕಾರ್ಯಕ್ರಮವನ್ನು ನಟ ‘ಕಿಚ್ಚ’ ಸುದೀಪ್ ನಡೆಸಿಕೊಡಲಿದ್ದಾರೆ.