ಸಿನಿವಾಣಿ

ಬೌಂಡರಿ ದಾಟಿದ ಚಂದನ್​ ಶೆಟ್ಟಿ ; ಸಂಗೀತದ ಜತೆ ನಟನೆಯಲ್ಲೂ ಬಿಜಿಯಾದ ರ್ಯಾಪರ್​

ಹರ್ಷವರ್ಧನ್ ಬ್ಯಾಡನೂರು

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಪಾರ್ಟಿ ಹಾಡುಗಳು, ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದಿರುವ "ಬಿಗ್​ಬಾಸ್​ ಸೀಸನ್​ 5' ವಿಜೇತ ಕನ್ನಡ ರ್ಯಾಪರ್​ ಚಂದನ್​ ಶೆಟ್ಟಿ ಇದೀಗ ನಟನೆಯಲ್ಲೂ ಬಿಜಿಯಾಗಿದ್ದಾರೆ. ಅವರು ನಟಿಸಿರುವ ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಲಾಗಿ ಮೂರು ಚಿತ್ರಗಳು ಸೆಟ್ಟೇರಿದ್ದು, ಇದೇ ವರ್ಷ ಹ್ಯಾಟ್ರಿಕ್​ ರಿಲೀಸ್​ ಸಂಭ್ರಮ ಆಚರಿಸುವ ನಿರೀಕ್ಷೆಯಲ್ಲಿದ್ದಾರೆ ಚಂದನ್​. ""ಎಲ್ರ ಕಾಲೆಳಿಯುತ್ತೆ ಕಾಲ', "ಸೂತ್ರಧಾರಿ' ಮತ್ತು "ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರಗಳ ಕೆಲಸ ಕೊನೆಯ ಹಂತದಲ್ಲಿದೆ. "ಕ್ಯಾಂಡಿ ಕ್ರಷ್​' ಒಂದು ಹಾಡು ಹೊರತುಪಡಿಸಿ ನನ್ನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಏಪ್ರಿಲ್​ ನಂತರ ಸಿನಿಮಾಗಳು ರಿಲೀಸ್​ ಆಗುವ ನಿರೀೆಯಿದೆ' ಎಂದು ಹೇಳಿಕೊಳ್ಳುತ್ತಾರೆ ಚಂದನ್​.

ರೀಲ್​ನಲ್ಲಿ ರಿಯಲ್​ ಜೋಡಿ
ವಿಶೇಷ ಅಂದರೆ "ಕ್ಯಾಂಡಿ ಕ್ರಷ್​' ಚಿತ್ರದಲ್ಲಿ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ದಂಪತಿ, ಬಾಯ್ ಫ್ರೆಂಡ್ ಮತ್ತು ಗರ್ಲ್​ ಫ್ರೆಂಡ್​​ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಶೂಟಿಂಗ್​ ಅಂತಿಮ ಹಂತದಲ್ಲಿದೆ.

"ಎಲ್ರ ಕಾಳೆಯುವ..' "ಸೂತ್ರಧಾರಿ'
ಕಳೆದ ಒಂದು ವರ್ಷದಿಂದ ಹೀಗೆ ನಾಲ್ಕು ಚಿತ್ರಗಳಲ್ಲಿ ಬಿಜಿಯಾಗಿರುವ ಚಂದನ್​, ಬ್ಯಾಕ್​ ಟು ಬ್ಯಾಕ್​ ಶೂಟಿಂಗ್​ನಲ್ಲಿ ತೊಡಗಿದ್ದಾರೆ. "ಮೊದಲು ಸುಜಯ್​ ಶಾಸ್ತ್ರಿ "ಎಲ್ರ ಕಾಲೆಳೆಯುತ್ತೆ ಕಾಲ' ಶೂಟಿಂಗ್​ ಪ್ರಾರಂಭವಾಯಿತು. 1980ರ ಕಾಲಟ್ಟದ ಕಥೆ. ಆಗಿನ ಕಾಲದ ಮಾತಿನ ಶೈಲಿ ವಿಭಿನ್ನವಾಗಿತ್ತು. ಹಾಗೇ ಮೈಕೈ ತುಂಬಿಕೊಂಡು ಗುಂಡಗೆ ಕಾಣಬೇಕಿದ್ದ ಕಾರಣ, ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡೆ. ಅದಾಗುತ್ತಲೇ "ಸೂತ್ರಧಾರಿ'ಯಲ್ಲಿ ಪೊಲೀಸ್​ ಅಧಿಕಾರಿ ಪಾತ್ರ ಬಂತು. ಆಗ ತೂಕ ಇಳಿಸಿಕೊಂಡು ಫಿಟ್​ಆಗಿ ಕಾಣಬೇಕಿತ್ತು. ತೂಕ ಇಳಿಸುವುದು ತುಂಬ ಕಷ್ಟವಾಗಿತ್ತು. ಆದರೂ ಮೂರ್ನಾಲ್ಕು ತಿಂಗಳು ಡಯಟ್​, ವರ್ಕೌಟ್​ ಮಾಡಿ 14 ಕೆಜಿ ತೂಕ ಇಳಿಸಿಕೊಂಡೆ' ಎಂದು ಹೇಳಿಕೊಳ್ಳುತ್ತಾರೆ ಚಂದನ್​. ಇನ್ನು ಅರುಣ್​ ಅಮುಕ್ತ ನಿರ್ದೇಶಿಸುತ್ತಿರುವ "ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದಲ್ಲಿ ಅವರು ಮೂರು ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದು, "ಈಗಲೇ ಲುಕ್​ಗಳ ಬಗ್ಗೆ ಏನೂ ರಿವೀಲ್​ ಮಾಡುವಂತಿಲ್ಲ' ಎನ್ನುತ್ತಾರೆ.

ಪಾರ್ಟಿಯಿಂದ ಮೆಲೋಡಿಯತ್ತ
ಹಾಗಂತ ಚಂದನ್​ ಶೆಟ್ಟಿ ನಟನೆಯಲ್ಲೇ ಫುಲ್​​ ಟೈಮ್​ ಬಿಜಿಯಾಗಿಲ್ಲ. ಸಂಗೀತ ನಿರ್ದೇಶನ, ಗಾಯನದತ್ತ ಕೂಡ ಗಮನ ಹರಿಸಿರುವ ಅವರು, ರಾಗಿಣಿ ನಟಿಸುತ್ತಿರುವ "ಮದನಿಕ' ಚಿತ್ರಕ್ಕಾಗಿ ಹಾಡೊಂದನ್ನು ಮಾಡುತ್ತಿದ್ದಾರೆ. ಹಾಗೇ "ಇದೇ ವರ್ಷ ಮೆಲೋಡಿ ಆಲ್ಬಂ ಸಾಂಗ್​ ರಿಲೀಸ್​ ಮಾಡಲಿದ್ದೇನೆ. ಪಾರ್ಟಿ ಹಾಡುಗಳಿಗೆ ಅಕ್ಟೋಬರ್​ನಿಂದ ಡಿಸೆಂಬರ್​ವರೆಗೆ ಕ್ರೇಜ್​ ಇರುತ್ತದೆ. ಉಳಿದ ಸಮಯದಲ್ಲಿ ಮೆಲೋಡಿ ಹಾಡುಗಳಿಗೆ ಹೆಚ್ಚು ಸ್ಕೋಪ್​ ಇರುತ್ತದೆ. ಹೀಗಾಗಿ ಮೆಲೋಡಿ ಸಾಂಗ್​ ಮಾಡುತ್ತಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ.