ಸಿನಿವಾಣಿ

ಕಿರುತೆರೆ ನಟಿಯರ ಕನ್ನಡ ರಾಜ್ಯೋತ್ಸವ

ನವೆಂಬರ್​ ಬಂತೆಂದರೆ ಎಲ್ಲರಲ್ಲೂ ಅದೇನೋ ಅಭಿಮಾನ. ಕನ್ನಡ ರಾಜ್ಯೋತ್ಸವಕ್ಕೆ ನಾಡು, ನುಡಿಯನ್ನು ಗೌರವಿಸುವ ಹಬ್ಬವೆಂದರೂ ತಪ್ಪಾಗದು. ಈ ವಿಶೇಷ ದಿನದ ಬಗ್ಗೆ ತಮ್ಮ ಬಾಲ್ಯದ ನೆನಪುಗಳನ್ನು ಮತ್ತೆ ಮೆಲುಕು ಹಾಕಿದ್ದಾರೆ ಕನ್ನಡದ ಕಿರುತೆರೆ ನಟಿಯರು. ಅವರ ಮನದಾಳ ಇಲ್ಲಿದೆ.

ಡಾನ್ಸ್​ನಲ್ಲಿ ನಾವೇ ಮುಂದು.. ಶಾಲಾ ಕಾಲೇಜು ದಿನಗಳಲ್ಲಿ ಯಾವುದೇ ಡಾನ್ಸ್​ ಕಾರ್ಯಕ್ರಮ ಇದ್ದರೂ, ಮೊದಲು ನನ್ನ ಉಪಸ್ಥಿತಿ ಇರಲೇಬೇಕು. ಬಹುತೇಕ ಎಲ್ಲ ವೇದಿಕೆ ಕಾರ್ಯಕ್ರಮಗಳಲ್ಲಿ ಹಾಡಿಗೆ ನೃತ್ಯ ಮಾಡಿದ್ದೇನೆ. ಅದರಲ್ಲೂ ಕನ್ನಡ ರಾಜ್ಯೋತ್ಸವ ಬಂದರೆ, ಕನ್ನಡ ಹಾಡುಗಳದ್ದೇ ಸಂಭ್ರಮ. ಕಾಲೇಜಿನಲ್ಲಿಯೂ ನಮ್ಮದೆ ತಂಡ ಕಟ್ಟಿಕೊಂಡು ಬೇರೆಬೇರೆ ಕಾಲೇಜುಗಳಲ್ಲಿನ ಸ್ಪರ್ಧೆಗೂ ಹೋದ ನೆನಪಿದೆ. ಇದೀಗ ಕಿರುತೆರೆಯಲ್ಲಿಯೇ ಹೆಚ್ಚು ಗಮನ ಹರಿಸುತ್ತಿದ್ದೇನೆ. ಸಿನಿಮಾ ಮಾಡಿದರೂ ನನ್ನ ಮೊದಲ ಪ್ರಾಶಸ ಏನಿದ್ದರೂ ಕನ್ನಡಕ್ಕೆ ಮಾತ್ರ. ಮೊದಲು ನಮ್ಮ ಮಣ್ಣಿನಲ್ಲಿ ನಾವು ಗುರುತಿಸಿಕೊಳ್ಳಬೇಕು. ಹಾಗಂತ ಬೇರೆ ಭಾಷೆಯ ಸಿನಿಮಾಗಳಿಗೆ ಆಡಿಷನ್​ ಕೊಟ್ಟಿಲ್ಲ ಅಂತಲ್ಲ. ತೆಲುಗಿನಲ್ಲಿ ಒಂದಷ್ಟು ದಿನ ಕೆಲಸವನ್ನೂ ಮಾಡಿದ್ದೇನೆ. ಆದರೆ ನನಗದು ಸರಿ ಅನಿಸಲಿಲ್ಲ. ಹಾಗಾಗಿ ಕನ್ನಡದಲ್ಲಿಯೇ ಮುಂದುವರಿಯುತ್ತಿದ್ದೇನೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಜೆ ಮಾಡದೆ, ಶೂಟಿಂಗ್​ನಲ್ಲಿ ಭಾಗವಹಿಸುತ್ತಿದ್ದೇನೆ.

| ನಮ್ರತಾ ನಟಿ

ಭುವನೇಶ್ವರಿ ವೇಷ ತೊಟ್ಟಿದ್ದೆ ...

ಕನ್ನಡ ರಾಜ್ಯೋತ್ಸವವನ್ನು ಒಂದೇ ದಿನಕ್ಕೆ ಸೀಮಿತವಾಗಿಸದೆ, ಇಡೀ ಒಂದು ತಿಂಗಳನ್ನು ಆಚರಿಸುತ್ತಿದ್ದೆವು. ಚಿಕ್ಕವಯಸ್ಸಿನಲ್ಲಿ ಯಾವುದಾದರೂ ಹಬ್ಬ ಬಂದರೆ ಸಾಕಿತ್ತು. ಹಾಗಿರುವ

ರಾಜ್ಯೋತ್ಸವ ಬಂದರೆ ಅದೆನೋ ಖುಷಿ. ಎಲ್ಲೆಡೆ "ಹಚ್ಚೇವು ಕನ್ನಡದ ದೀಪ ...' ಹಾಡು ಮೊಳಗುತ್ತಿರುತ್ತಿತ್ತು. ಶಾಲೆಗಳಲ್ಲಿ ಛದ್ಮವೇಷದ ಸ್ಪರ್ಧೆ ಹಿನ್ನೆಲೆಯಲ್ಲಿ ತಾಯಿ ಭುವನೇಶ್ವರಿಯ

ವೇಷ ತೊಟ್ಟು ಶಾಲೆಗೆ ಹೋಗಿದ್ದು ಇನ್ನೂ ನೆನಪಿದೆ. ಗುಂಪು ನೃತ್ಯಗಳಲ್ಲಿಯೂ ಹೆಜ್ಜೆ ಹಾಕಿದ್ದೇನೆ. ಸಾಕಷ್ಟು ಪ್ರಶಸ್ತಿಗಳು, ಪ್ರಶಸ್ತಿ ಪತ್ರಗಳು ಮನೆಯಲ್ಲಿವೆ. ಇದೀಗ ನೆನಪಿಸಿಕೊಂಡರೆ ಅಂದಿನ ಸಂಭ್ರಮ ಕೊಂಚ ತಗ್ಗಿದೆ ಎನ್ನಬಹುದು.

| ಮೇಘಶ್ರೀ ನಟಿ

ಬಾಲ್ಯದ ನೆನಪುಗಳು ಮತ್ತೆ ನೆನಪಾದಾಗ

ಚಿತ್ರಕಲೆಯಲ್ಲಿಯೂ ಮೂಡಿತ್ತು ಕನ್ನಡ ಬಾವುಟ ಶಾಲಾ ಕಾಲೇಜಿನಲ್ಲಿ ಕನ್ನಡ ನನ್ನ ಇಷ್ಟದ ವಿಷಯ. 125ಕ್ಕೆ 120 ಅಂಕ ಪಡೆದಿದ್ದೆ. ಕನ್ನಡ ವಿಷಯಕ್ಕೆ ಸಂಬಂಧಪಟ್ಟ ಯಾವುದೇ ಸ್ಪರ್ಧೆ ಇದ್ದರೂ ನಾನಲ್ಲಿ ಹಾಜರಿ. ಬಹುತೇಕ ಎಲ್ಲ ಕಾಂಪಿಟೇಷನ್​ನಲ್ಲಿ ಮೊದಲ ಪ್ರಶಸ್ತಿ ಇದ್ದೇ ಇರುತ್ತಿತ್ತು. ಅದರ ಜತೆಗೆ ರಾಜ್ಯೋತ್ಸವ ಪ್ರಯುಕ್ತ ನೃತ್ಯ ರೂಪಕಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದೆ. ಚಿತ್ರಕಲೆಯಲ್ಲಿಯೂ ಮುಂದಿದ್ದೆ. ಕರ್ನಾಟಕದ ಭೂಪಟದ ಚಿತ್ರ ಬರೆಯುತ್ತಿದ್ದೆ. ಹಳದಿ, ಕೆಂಪು ಬಣ್ಣದ ಬದಲು, ಹಳದಿ ಮತ್ತು ಕೆಂಪು ಬಣ್ಣದ ವಸ್ತುಗಳನ್ನು ಬಳಸಿಕೊಂಡು ಭೂಪಟ ರಚಿಸುತ್ತಿದ್ದೆ. ಇದೀಗ ಕನ್ನಡ ಬಳಸಿ ಎಂದು ಕೇಳಿಕೊಳ್ಳುವಂಥ ಸ್ಥಿತಿ ಎದುರಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡ ತುಂಬ ಣಿಸುತ್ತಿದೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಮ್ಮ ಜತೆ ಆಂಧ್ರ, ಕೇರಳದವರಿಗೂ ಭಾಷೆ ಕಲೀರಿ ಎಂದಿದ್ದೆ. ಇಲ್ಲ ಎಂದಿದ್ದಕ್ಕೆ ಚೆನ್ನಾಗಿ ಬೈದಿದ್ದೆ. ಕಸ್ಟಮರ್​ ಕೇರ್​ನಿಂದ ಕರೆ ಬಂದರೆ ನನ್ನ ಮಾತು ಶುರುವಾಗುವುದೇ ಕನ್ನಡದಲ್ಲಿ.

| ಸುಪ್ರಿತಾ ಸತ್ಯನಾರಾಯಣ್​ ನಟಿ