ಬೆಂಗಳೂರು: ಗಿಣಿರಾಮ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸುವ ಮೂಲಕ ಕಿರುತರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಚೈತ್ರಾ ರಾವ್ ಇದೀಗ ತಮ್ಮ ಜೀವನದ ಅತ್ಯಂತ ಕಷ್ಟಕರ ಸಂದರ್ಭ, ನೋವಿನ ಕಥೆಯನ್ನು ವಿಡಿಯೋ ಮುಖಾಂತರ ಅಭಿಮಾನಿಗಳೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಗಿಣಿರಾಮ ಧಾರವಾಹಿಯಲ್ಲಿ ಆಯಿಸಾಹೇಬ್ ಪಾತ್ರದ ಮೂಲಕ ಮನೆ ಮನಗಳನ್ನು ತಲುಪಿದ್ದ ಚೈತ್ರಾ ರಾವ್, ಈ ಸೀರಿಯಲ್ ಮುಗಿದ ಬಳಿಕ ಯಾವುದೇ ಧಾರವಾಹಿ ಅಥವಾ ಇತರೆ ನಟನಾ ವೃತ್ತಿಗೆ ಸಂಬಂಧಿಸಿದ ಪ್ರಾಜೆಕ್ಟ್ಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಇದರ ನಡುವೆಯೇ ಅವರು ಇತ್ತೀಚೆಗಷ್ಟೇ ಕೂದಲು ತೆಗೆಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಾಗಿನಿಂದ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಪ್ರಶ್ನೆ, ಗೊಂದಲಗಳು ಹರಿದಾಡುತ್ತಿದ್ದವು. ಈ ಕುರಿತಂತೆ ತಮಗೆ ಬರುತ್ತಿದ್ದ ಒಂದಷ್ಟು ಪ್ರಶ್ನೆಗಳಿಗೆ ಸ್ವತಃ ಚೈತ್ರಾ ಅವರೇ ಖುದ್ದಾಗಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹರಿಬಿಟ್ಟ ನಟಿ, ಯಾಕೆ ನೀವು ಯಾವುದೇ ಪೋಸ್ಟ್ ಅಥವಾ ಮಾಹಿತಿಯನ್ನು ಹಂಚಿಕೊಳ್ಳುತ್ತಿಲ್ಲ ಎಂದು ತುಂಬಾ ಜನರು ಮೆಸೇಜ್ ಕಳುಹಿಸಿ ವಿಚಾರಿಸುತ್ತಿದ್ದೀರಿ. ಅದಕ್ಕೆ, ಸ್ವತಃ ನಾನೇ ನನ್ನ ದೇಹದ ಆರೋಗ್ಯ ಸ್ಥಿತಿಯ ಬಗ್ಗೆ ಸ್ಪಷ್ಟನೆ ಕೊಡಲು ನಿಮ್ಮ ಮುಂದೆ ವಿಡಿಯೋ ಮೂಲಕ ಬಂದಿದ್ದೇನೆ ಎಂದರು.
ನನಗೆ ಕರುಳಿನಲ್ಲಿ ಗಡ್ಡೆ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಇದೊಂದು ಸಾಮಾನ್ಯ ಸಮಸ್ಯೆ ಎಂದು ಭಾವಿಸಲಾಗಿತ್ತು. ಆದರೆ, ನಂತರದಲ್ಲಿ ಅದು ಪರೀಕ್ಷೆಯಲ್ಲಿ ಕ್ಯಾನ್ಸರ್ ಅಂತ ಗೊತ್ತಾಯಿತು. ಈ ಚಿಕಿತ್ಸೆ ಪಡೆದು ಇನ್ನೇನು ಸುಧಾರಿಸಿಕೊಳ್ಳೋಣ ಎನ್ನುವಷ್ಟರಲ್ಲಿ ಅಂಡಾಶಯದಲ್ಲಿ ಕ್ಯಾನ್ಸರ್ ಪತ್ತೆಯಾಯಿತು. ಈ ವಿಷಯ ಗೊತ್ತಾಗುತ್ತಿದ್ದಂತೆ ನಾನು ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗಿ ಹೋದೆ. ಈ ಶಾಕ್ನಿಂದ ಹೊರಬರಲು ನನಗೆ ಸ್ವಲ್ಪ ಸಮಯ ಬೇಕಾಯಿತು ಎಂದಿದ್ದಾರೆ.
ಈ ಸಂದರ್ಭದಲ್ಲಿ ಗರ್ಭಕಂಠ ಮತ್ತು ಗರ್ಭಕೋಶ ಎರಡನ್ನೂ ತೆಗೆಸಿದೆ. ಮೊದಲ ಶಸ್ತ್ರಚಿಕಿತ್ಸೆಗಿಂತ ಎರಡನೇ ಶಸ್ತ್ರಚಿಕಿತ್ಸೆಯ ನಂತರ ದೈಹಿಕವಾಗಿ ತೀವ್ರವಾಗಿ ಬಳಲಿದೆ. ಅನಾರೋಗ್ಯ ಸಮಸ್ಯೆಯಿಂದ ವಿಪರೀತ ಆಯಾಸ ಆಗುತ್ತಿದ್ದ ಕಾರಣ, ನಾನು ಯಾರನ್ನು ಹೆಚ್ಚಾಗಿ ನೋಡಲು ಹೋಗುತ್ತಿರಲಿಲ್ಲ. ಬದಲಿಗೆ ದೂರ ಉಳಿಯುತ್ತಿದ್ದೆ. ಚಿಕಿತ್ಸೆಯ ಭಾಗವಾಗಿ ಕೀಮೋಥೆರಪಿ ಮಾಡಿಸಬೇಕು ಹಾಗೂ ಕೂದಲು ಕತ್ತರಿಸಬೇಕು ಎಂದು ವೈದ್ಯರು ತಿಳಿಸಿದರು. ಈ ಕಾರಣದಿಂದ, ಕೂದಲನ್ನು ಸಂಪೂರ್ಣವಾಗಿ ತೆಗೆಸಿಕೊಂಡಿದ್ದೇನೆ ಎಂದರು.
ಪ್ರಸ್ತುತ ಕೀಮೋಥೆರೆಪಿ ಚಿಕಿತ್ಸೆ ನಡೆಯುತ್ತಿದ್ದು, ಶೀಘ್ರವೇ ಸಂಪೂರ್ಣವಾಗಿ ಗುಣಮುಖಳಾಗಿ ನಿಮ್ಮ ಮುಂದೆ ಹಾಜರಾಗುವೆ. ನಿಮ್ಮೆಲ್ಲರ ಪ್ರಾರ್ಥನೆ ನನ್ನೊಂದಿಗೆ ಇರಲಿ ಎಂದು ಭಾವುಕರಾಗಿ ಕೇಳಿಕೊಂಡಿದ್ದಾರೆ. ನಟಿಯ ಮಾತು ಆಲಿಸಿದ ಅಭಿಮಾನಿಗಳು ಮತ್ತು ನೆಟ್ಟಿಗರು, ಕಮೆಂಟ್ ಮೂಲಕ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.