ಸಿನಿವಾಣಿ

ಪರಭಾಷೆಗೆ ರೇಮೊ

ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ‘ರೇಮೊ’ ಮೂಲಕ ಮತ್ತೆ ಲವ್​ಟ್ರಾ್ಯಕ್​ಗೆ ಮರಳಿರುವುದು ಈಗಾಗಲೇ ಗೊತ್ತಿರುವ ವಿಚಾರ. ಬಹುತೇಕ ಚಿತ್ರೀಕರಣವನ್ನೂ ಮುಗಿಸಿ ಕೊಂಡಿರುವ ಅವರು ಇದೀಗ ಹೊಸದಾದ ವಿಚಾರದೊಂದಿಗೆ ಆಗಮಿಸುತ್ತಿದ್ದಾರೆ. ಅದೇನೆಂದರೆ, ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿನಲ್ಲಿಯೂ ‘ರೇಮೊ’ ಸಿನಿಮಾ ತೆರೆಗೆ ತರುವ ಪ್ಲಾ್ಯನ್ ಸಿದ್ಧಪಡಿಸಿದ್ದಾರೆ.

ಇಶಾನ್ ಮತ್ತು ಆಶಿಕಾ ರಂಗನಾಥ್ ಮುಖ್ಯಭೂಮಿಕೆ ಯಲ್ಲಿರುವ ಈ ಚಿತ್ರ ಈಗಾಗಲೇ ಮೋಷನ್ ಪೋಸ್ಟರ್ ಮೂಲಕ ಒಂದಷ್ಟು ಕುತೂಹಲ ಮೂಡಿಸಿದೆ. ಇದೀಗ ಕನ್ನಡದ ಜತೆಗೆ ಬಹುಭಾಷೆಯತ್ತಲೂ ಮುಖ ಮಾಡಿದೆ. ಅಂದಹಾಗೆ, ಇಶಾನ್ ಈ ಹಿಂದೆ ‘ರೋಗ್’ ಚಿತ್ರದ ಮೂಲಕ ಟಾಲಿವುಡ್​ನಲ್ಲಿ ಖಾತೆ ತೆರೆದಿದ್ದರು. ಇತ್ತ ನಿರ್ದೇಶಕ ಪವನ್ ಒಡೆಯರ್ 2013ರಲ್ಲಿ ಕನ್ನಡದ ‘ಗೋವಿಂದಾಯ ನಮಃ’ ಚಿತ್ರವನ್ನು ‘ಪೋಟಗಾಡು’ ಹೆಸರಿನಲ್ಲಿ ರಿಮೇಕ್ ಮಾಡಿದ್ದರು. ಇದೀಗ ಆಶಿಕಾ ರಂಗನಾಥ್ ಮೊದಲ ಸಲ ಪರಭಾಷೆಯತ್ತ ಹೊರಟಿದ್ದಾರೆ.

‘ನಮ್ಮ ಕನ್ನಡ ಸಿನಿಮಾಗಳು ಬೇರೆ ಭಾಷೆಗೆ ಡಬ್ ಆಗುತ್ತದೆ ಎಂದರೆ ಸಹಜವಾಗಿ ಖುಷಿ ಆಗೇ ಆಗುತ್ತದೆ. ಇದೀಗ ಮೊದಲ ಬಾರಿ ನನ್ನ ಸಿನಿಮಾ ಬೇರೆ ಭಾಷೆಗಳಲ್ಲಿ ತೆರೆಕಾಣಲಿದೆ. ನಿಜಕ್ಕೂ ಇದೊಂದು ಒಳ್ಳೇ ಬೆಳವಣಿಗೆ’ ಎಂಬುದು ಆಶಿಕಾ ಮಾತು. ಇನ್ನು ಇದೇ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ನೀಡುವ ಪವನ್, ‘ಕನ್ನಡ ಮತ್ತು ತೆಲುಗಿನಲ್ಲಿ ರೇಮೊ ಎಂದೇ ಶೀರ್ಷಿಕೆ ಮುಂದುವರಿಯಲಿದೆ. ತಮಿಳಿನಲ್ಲಿ ಇನ್ನೂ ಅಧಿಕೃತ ಮಾಡಿಲ್ಲ. ಏಳು ವರ್ಷದ ಬಳಿಕ ಮತ್ತೆ ಟಾಲಿವುಡ್​ಗೆ ಹೊರಟಿದ್ದೇನೆ. ಇನ್ನು ಹತ್ತು ದಿನದ ಶೂಟಿಂಗ್ ಬಾಕಿ ಇದೆ. ಚಿತ್ರೀಕರಣೋತ್ತರ ಕೆಲಸವೂ ಕೊನೇ ಹಂತದಲ್ಲಿದೆ’ 2021ಕ್ಕೆ ರಿಲೀಸ್ ಪ್ಲಾನ್ ಇದೆ’ ಎನ್ನುತ್ತಾರವರು. ಸಿ.ಆರ್ ಮನೋಹರ್ ನಿರ್ವಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.