ಸಿನಿವಾಣಿ

ಆಚರಣೆಗಳ ಸುತ್ತ ಸಂಘರ್ಷದ ಕಥೆ: ವಿಜಯವಾಣಿ ಸಿನಿಮಾ ವಿಮರ್ಶೆ

  • ಚಿತ್ರ: ಕಾಂತಾರ
  • ನಿರ್ದೇಶನ: ರಿಷಬ್ ಶೆಟ್ಟಿ
  • ನಿರ್ಮಾಣ: ವಿಜಯ್ ಕುಮಾರ್ ಕಿರಗಂದೂರು
  • ತಾರಾಗಣ: ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಮಾನಸಿ ಸುಧೀರ್, ಪ್ರಕಾಶ್ ತುಮ್ಮಿನಾಡು ಮುಂತಾದವರು

| ಚೇತನ್ ನಾಡಿಗೇರ್ ಬೆಂಗಳೂರು

ನಮ್ಮದಲ್ಲದ ಬೇರೆಬೇರೆ ಭಾಷೆಗಳ ನೇಟಿವಿಟಿಯನ್ನು ತಂದು ಇಲ್ಲಿ ರೀಮೇಕ್ ಮಾಡಲಾಗುತ್ತದೆ, ಕನ್ನಡದಲ್ಲಿ ಇಲ್ಲಿನ ಮಣ್ಣಿಗೆ ಹತ್ತಿರವಾದ ಸಿನಿಮಾಗಳು ಬರುವುದಿಲ್ಲ ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಅದಕ್ಕೊಂದು ಉತ್ತರ ‘ಕಾಂತಾರ’. ಕರಾವಳಿ ಕರ್ನಾಟಕ ಭಾಗದ ಸೊಗಡನ್ನು ಈ ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ರಿಷಬ್ ಶೆಟ್ಟಿ ಮಾಡಿದ್ದಾರೆ.

ಅದೊಂದು ದೊಡ್ಡ ಕಾಡು. ಆ ಕಾಡಿನ ಅಂಚಿನಲ್ಲೊಂದೂರು. ಆ ಊರನ್ನು ಕಾಯುವ ದೈವ. ಆ ದೈವವನ್ನು ಸಂತುಷ್ಟಪಡಿಸಲು ಒಂದಿಷ್ಟು ಆಚರಣೆಗಳು, ಇದರ ಜತೆಗೆ ಅರಣ್ಯ ಇಲಾಖೆಯೊಂದಿಗೆ ಆ ಹಳ್ಳಿಯ ಜನರ ಕಿತ್ತಾಟ ... ಇವೆಲ್ಲವನ್ನೂ ಇಟ್ಟುಕೊಂಡು ‘ಕಾಂತಾರ’ ಎಂಬ ಜಗತ್ತನ್ನು ಕಟ್ಟಿಕೊಟ್ಟಿದ್ದಾರೆ ರಿಷಬ್. ಇದೊಂದು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆ. ಆಚರಣೆ ಮುಖ್ಯ ಎಂಬುದನ್ನು ಒಂದು ಪಾತ್ರ ಪ್ರತಿಪಾದಿಸಿದರೆ, ಅದರಿಂದ ಪ್ರಾಣಿ-ಪಕ್ಷಿಗಳಿಗೆ ಮತ್ತು ಕಾಡಿಗೆ ಸಮಸ್ಯೆ ಎದುರಾಗ ಬಾರದು ಎಂದು ಇನ್ನೊಂದು ಪಾತ್ರ ಹೇಳುತ್ತದೆ. ಈ ಎರಡೂ ಪಾತ್ರಗಳು ಹೋರಾಟ ಮಾಡುತ್ತಿರುವುದು ಒಂದೇ ವಿಷಯಕ್ಕೆ. ಇವರಿಬ್ಬರನ್ನೂ ಯಾಮಾರಿಸಿ ಮೂರನೆಯ ಶಕ್ತಿಯೊಂದು ಕಾಡಿನ ಜಾಗವನ್ನು ಲಪಟಾಯಿಸುವುದಕ್ಕೆ ಏನೆಲ್ಲ ಷಡ್ಯಂತ್ರ ಮಾಡುತ್ತದೆ ಎಂಬುದು ಚಿತ್ರದ ಕಥೆ. ಕಥೆ ನಡೆಯುವುದು 90ರ ದಶಕದಲ್ಲಿ. ಆದರೆ, ಅದಕ್ಕೆ ಎರಡು ಫ್ಲಾಶ್​ಬ್ಯಾಕ್​ಗಳಿವೆ. ಹಳೆಯದನ್ನು ಆಗಾಗ ನೆನಪಿಸುತ್ತಾ ಚಿತ್ರ ಸಾಗುತ್ತದೆ.

ಇಲ್ಲಿ ಕರಾವಳಿಯ ಸೊಗಡಿದೆ. ಅಲ್ಲಿನ ಜನರಲ್ಲಿ ಹಾಸುಹೊಕ್ಕಾಗಿರುವ ಕಂಬಳ, ಭೂತಾರಾಧನೆ, ಭೂತಕೋಲ ಮುಂತಾದ ಆಚರಣೆಗಳನ್ನು ವಿವರವಾಗಿ ಕಟ್ಟಿಕೊಡಲಾಗಿದೆ. ಅಷ್ಟೇ ಆಗಿಬಿಟ್ಟಿದ್ದರೆ ಇದೊಂದು ಸಾಕ್ಷ್ಯಚಿತ್ರವಾಗಿ ಬಿಡುವ ಅಪಾಯವಿತ್ತು. ಈ ವಿಷಯಗಳ ಸುತ್ತ ಒಂದು ಕಥೆ ಕಟ್ಟಿದ್ದಾರೆ ರಿಷಬ್. ಅದನ್ನು ಕಮರ್ಷಿಯಲ್ ಆಗಿ ನಿರೂಪಿಸಿದ್ದಾರೆ. ಒಂದು ಕಮರ್ಷಿಯಲ್ ಚಿತ್ರಕ್ಕೆ ಏನೆಲ್ಲ ಅಂಶಗಳು ಬೇಕೋ, ಅವೆಲ್ಲವೂ ಈ ಚಿತ್ರದಲ್ಲಿವೆ. ರಿಷಬ್ ಅದೇ ಮಣ್ಣಿನವರಾದ್ದರಿಂದ, ಅಲ್ಲಿನ ಆಚಾರ-ವಿಚಾರ ಚೆನ್ನಾಗಿ ಗೊತ್ತಿರುವುದರಿಂದ ಅವರು ಇಡೀ ಪರಿಸರವನ್ನು ಮತ್ತು ಅಲ್ಲಿನ ಆಚರಣೆಗಳನ್ನು ನ್ಯಾಯಯುತವಾಗಿ ಕಟ್ಟಿಕೊಟ್ಟಿದ್ದಾರೆ. ಕರಾವಳಿ ಸಂಸ್ಕೃತಿಯ ಪರಿಚಯವಿದ್ದವರಿಗೆ ಈ ಚಿತ್ರ ಬಹಳ ಬೇಗನೇ ಕನೆಕ್ಟ್ ಆಗಿಬಿಡುತ್ತದೆ. ಮಿಕ್ಕವರಿಗೆ ಸ್ವಲ್ಪ ನಿಧಾನ ಎಂದನಿಸಬಹುದು. ಅದರಲ್ಲೂ ಚಿತ್ರದ ಮೊದಲಾರ್ಧವನ್ನು ಪರಿಸರ, ಆಚರಣೆ, ಪಾತ್ರಗಳನ್ನು ಕಟ್ಟಿಕೊಡುವುದಕ್ಕೆ ಮೀಸಲಿಟ್ಟಿದ್ದಾರೆ ರಿಷಬ್. ದ್ವಿತೀಯಾರ್ಧದಲ್ಲಿ ಚಿತ್ರ ವೇಗ ಪಡೆಯುತ್ತದೆ. ಚಿತ್ರದ ಹೈಲೈಟ್ ಎಂದರೆ ಅದು ಕ್ಲೈಮ್ಯಾಕ್ಸ್. ಕೊನೆಯ ಇಪ್ಪತ್ತು ನಿಮಿಷ ಉಗ್ರವಾಗುವ ರಿಷಬ್, ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತಾರೆ.

ಬಹುಶಃ ರಿಷಬ್ ಬಿಟ್ಟರೆ, ಈ ಪಾತ್ರದಲ್ಲಿ ಇನ್ನೊಬ್ಬರನ್ನು ಊಹಿಸಿಕೊಳ್ಳೋದು ಕಷ್ಟ. ಶಿವನಾಗಿ ಅವರ ಮ್ಯಾನರಸಿಂ, ಮಾತಿನ ಶೈಲಿ ಇಷ್ಟವಾಗುತ್ತದೆ. ಕ್ಲೈಮ್ಯಾಕ್ಸ್​ನಲ್ಲಿ ಅವರ ನಟನೆಯನ್ನು ನೋಡಿಯೇ ಅನುಭವಿಸಬೇಕು. ಇದುವರೆಗೂ ನಿರ್ದೇಶಕರಾಗಿ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದ್ದ ರಿಷಬ್, ಈ ಚಿತ್ರದಲ್ಲಿ ನಟರಾಗಿಯೂ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುತ್ತಾರೆ. ಸಪ್ತಮಿ ಗೌಡ, ಅಚ್ಯುತ್, ಕಿಶೋರ್, ಪ್ರಕಾಶ್ ತುಮ್ಮಿನಾಡು ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಚಿತ್ರಕ್ಕೆ ಜೀವ ತುಂಬುವಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಪ್ರಮುಖ ಪಾತ್ರ ವಹಿಸುತ್ತವೆ. ಕೆಲವು ಸಂಭಾಷಣೆಗಳು ನಗು ಉಕ್ಕಿಸುತ್ತವೆ.