ಹಿಂದಿ ಚಿತ್ರ ನಿರ್ದೇಶಿಸುತ್ತಿರುವ ಕನ್ನಡ ನಿರ್ದೇಶಕರು
- ಪವನ್ ಒಡೆಯರ್ ಹಿಂದಿಯಲ್ಲಿ ಆವಸ್ಥಿ ವರ್ಸಸ್ ಆವಸ್ಥಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ
- ನಂದಕಿಶೋರ್ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ನಿರ್ಮಾಣದಲ್ಲಿ ವೃಷಭ ನಿರ್ದೇಶಿಸಿದ್ದಾರೆ
- ತಿಥಿ ಖ್ಯಾತಿಯ ರಾಮ್ ರೆಡ್ಡಿ ನಿರ್ದೇಶನದ ಹಿಂದಿ ಸಿನಿಮಾ ಜುಗ್ನಾಮಾ ಈಗಾಗಲೇ ರಿಲೀಸ್ ಆಗಿದೆ
- ಭಜರಂಗಿ ಸರಣಿಯ ಎ. ಹರ್ಷ ಟೈಗರ್ ಶ್ರಾಫ್ ನಾಯಕನಾಗಿದ್ದ ಬಾಘೀ 4ಗೆ ಆ್ಯಕ್ಷನ್-ಕಟ್ ಹೇಳಿದ್ದರು
- ಸಾಹಸ ನಿರ್ದೇಶಕ ರವಿ ವರ್ಮಾ ಬ್ಲೈಂಡ್ ಬಾಬು ಎಂಬ ಚಿತ್ರ ನಿರ್ದೇಶಿಸುತ್ತಿದ್ದಾರೆ
- ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ನಿರ್ದೇಶಕ ಮಂಸೋರೆ ಜೂಲಿಯೆಟ್ ಚಿತ್ರದ ಮೂಲಕ ಬಾಲಿವುಡ್ಗೆ ಹಾರಿದ್ದಾರೆ
ಈಗಾಗಲೇ ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ರಿಷಬ್ ಶೆಟ್ಟಿ ಅಂತಹ ಕನ್ನಡದ ನಿರ್ದೇಶಕರು, ಅವರ ಜತೆ ಯಶ್, ಸುದೀಪ್, ಧ್ರುವ ಸರ್ಜಾ, ರಕ್ಷಿತ್ ಶೆಟ್ಟಿ ಅವರಂತಹ ನಟರು ದೇಶಾದ್ಯಂತ ಛಾಪು ಮೂಡಿಸುತ್ತಿದ್ದಾರೆ. ಆದರೆ, ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಅಪರೂಪಕ್ಕೊಮ್ಮೆ ಕನ್ನಡದ ನಿರ್ದೇಶಕರು, ನಟ, ನಟಿಯರು ಕರ್ನಾಟಕದ ಗಡಿ ದಾಟಿದ್ದರಷ್ಟೇ. ಗಿರೀಶ್ ಕಾರ್ನಾಡ್ ("ಸ್ವಾಮಿ', "ಉತ್ಸವ್'), ವಿಜಯ್ ರೆಡ್ಡಿ ("ತೇರಿ ಮೆಹರ್ಬಾನಿಯಾ', "ಜವಾಬ್ ಹಮ್ ದೇಂಗೆ', "ಗಂಗಾ ತೇರೆ ದೇಶ್ ಮೇ'), ಎಸ್.ವಿ. ರಾಜೇಂದ್ರ ಸಿಂಗ್ ಬಾಬು ("ಮೇರಿ ಆವಾಜ್ ಸುನೋ', "ಶರಾರಾ', "ಮೇರೆ ಫೈಸ್ಲಾ', "ಏಕ್ ಸೆ ಭಲೇ ದೋ') ಹೀಗೆ ಕೆಲವರಷ್ಟೇ ಬಾಲಿವುಡ್ ಚಿತ್ರಗಳನ್ನು ನಿರ್ದೇಶಿಸಿದ್ದರು. ಕ್ರಮೇಣ ಕನ್ನಡದ ನಿರ್ದೇಶಕರು ಬಾಲಿವುಡ್ಗೆ ಹೋಗಿದ್ದು ಕಡಿಮೆ. ಆದರೆ, ಇದೀಗ ಸಾಲು ಸಾಲು ಸ್ಯಾಂಡಲ್ವುಡ್ ಡೈರೆಕ್ಟರ್ಗಳು ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಪವನ್ ಒಡೆಯರ್ ವರ್ಸಸ್ ಆವಸ್ಥಿ
"ಗೋವಿಂದಾಯ ನಮಃ', "ರಣವಿಕ್ರಮ', "ನಟಸಾರ್ವಭೌಮ', ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಬಾಲಿವುಡ್ಗೆ ಹಾರಿ, ಎರಡು ವರ್ಷಗಳೇ ಆಗಿವೆ. ಅವರು ಆ್ಯಕ್ಷನ್-ಕಟ್ ಹೇಳುತ್ತಿರುವ ಕೋರ್ಟ್ರೂಮ್ ಡ್ರಾಮಾ "ಆವಸ್ಥಿ ವರ್ಸಸ್ ಆವಸ್ಥಿ' ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ವಕೀಲನೊಬ್ಬ ತನ್ನ ವಿರುದ್ಧವೇ ಕೋರ್ಟ್ನಲ್ಲಿ ದಾವೆ ಹೂಡುವ ವಿಭಿನ್ನ ಕಥಾಹಂದರವಿರುವ ಈ ಚಿತ್ರ ಇನ್ನಷ್ಟೇ ಬಿಡುಗಡೆ ದಿನಾಂಕ ಘೋಷಿಸಬೇಕಿದೆ.
ಬಾಘೀ ಸರಣಿಯ ಹರ್ಷ
"ಬಿರುಗಾಳಿ', "ಚಿಂಗಾರಿ', "ಭಜರಂಗಿ' ಸರಣಿ, "ವೇದ' ಚಿತ್ರಗಳನ್ನು ನಿರ್ದೇಶಿಸಿರುವ ನೃತ್ಯನಿರ್ದೇಶಕ ಎ. ಹರ್ಷ ಕಳೆದ ವರ್ಷ "ಭೀಮ' ಮೂಲಕ ತೆಲುಗಿಗೆ ಪದಾರ್ಪಣೆ ಮಾಡಿದ್ದರು. ಅದರ ಬೆನ್ನಲ್ಲೇ ಈ ವರ್ಷ ಬಾಲಿವುಡ್ನ ಹಿಟ್ "ಬಾಘೀ' ಸರಣಿಯ ನಾಲ್ಕನೇ ಚಿತ್ರ ನಿರ್ದೇಶಿಸಿದ್ದು, ಕಳೆದ ಸೆಪ್ಟೆಂಬರ್ನಲ್ಲಿ ರಿಲೀಸ್ ಆಗಿತ್ತು. ಈ ಆ್ಯಕ್ಷನ್ ಥ್ರಿಲ್ಲರ್ ಬಿಡುಗಡೆ ಬೆನ್ನಲ್ಲೇ ಹರ್ಷ ಇನ್ನೊಂದು ಹಿಂದಿ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ನಂದಕಿಶೋರ್ ಜಂಟಿ ಕಾರ್ಯಾಚರಣೆ
"ವಿಕ್ಟರಿ', "ಅಧ್ಯಕ್ಷ', "ರನ್ನ', "ಮುಕುಂದ ಮುರಾರಿ', "ಪೊಗರು' ಖ್ಯಾತಿಯ ನಂದಕಿಶೋರ್ ವಿಭಿನ್ನ ಸಾಹಸಕ್ಕೆ ಕೈಹಾಕಿದ್ದಾರೆ. ಈ ಕನ್ನಡದ ನಿರ್ದೇಶಕ, ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಒಡೆತನದ ಬಾಲಾಜಿ ಟೆಲಿಫಿಲಂಸ್ ಬ್ಯಾನರ್ನಲ್ಲಿ ಮಾಲಿವುಡ್ ನಟ ಮೋಹನ್ ಲಾಲ್ ನಾಯಕನಾಗಿರುವ "ವೃಷಭ' ನಿರ್ದೇಶಿಸಿದ್ದಾರೆ. ಸಿನಿಮಾ ಇದೇ 25ರಂದು ಪ್ಯಾನ್ ಇಂಡಿಯಾ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಸಮರ್ಜಿತ್ ಲಂಕೇಶ್, ರಾಗಿಣಿ, ಗರುಡಾ ರಾಮ್, ರಘು ಸೇರಿ ಹಲವು ಕನ್ನಡಿಗರು ನಟಿಸಿದ್ದಾರೆ.
ಡಾ. ರವಿವರ್ಮಾ ಹೊಸ ಸಾಹಸ
ಸಾಹಸ ನಿರ್ದೇಶಕ ಡಾ. ರವಿವರ್ಮಾ ಕೆಲ ವರ್ಷಗಳಿಂದ ತೆಲುಗು, ತಮಿಳು, ಹಿಂದಿಯಲ್ಲೂ ಬಿಜಿಯಾಗಿದ್ದಾರೆ. ಸ್ಯಾಂಡಲ್ವುಡ್ನಲ್ಲಿ "ರುಸ್ತುಂ' ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸಿದ್ದ ಅವರು, ಇದೀಗ ಬಾಲಿವುಡ್ನಲ್ಲೂ ಆ್ಯಕ್ಷನ್&ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ "ಬ್ಲೈಂಡ್ ಬಾಬು' ಎಂದು ನಾಮಕರಣ ಮಾಡಲಾಗಿದ್ದು, ನವಾಜುದ್ದಿನ್ ಸಿದ್ದಿಕಿ ನಾಯಕನಾಗಿದ್ದಾರೆ. ಸದ್ಯ ಚಿತ್ರೀಕರಣ ಭರದಿಂದ ಸಾಗಿದೆ.
"ಜೂಲಿಯೆಟ್' ಜತೆ ಮಂಸೋರೆ
ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ನಿರ್ದೇಶಕ ಮಂಸೋರೆ "ಜೂಲಿಯೆಟ್' ಎಂಬ ಫೀಲ್ ಗುಡ್ ಮ್ಯೂಸಿಕಲ್ ಸಿನಿಮಾ ಮೂಲಕ ಬಾಲಿವುಡ್ಗೆ ಹಾರಿದ್ದಾರೆ. ಅದರ ಜತೆಗೆ "ಆ್ಯಕ್ಟ್ 1978' ಹಿಂದಿ ರಿಮೇಕ್ ಮತ್ತು ಇನ್ನೊಂದು ್ಯಾಂಟಸಿ ಥ್ರಿಲ್ಲರ್ಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಕನ್ನಡ ನಿರ್ದೇಶಕರು ಬಾಲಿವುಡ್ನಲ್ಲಿ ಅವಕಾಶ ಪಡೆಯುತ್ತಿರುವ ಬಗ್ಗೆ ಅವರು, "ಕನ್ನಡದ ನಿರ್ದೇಶಕರು ಕಥೆಯನ್ನು ಪ್ರಸ್ತುತಪಡಿಸುವ ರೀತಿ ಬಾಲಿವುಡ್ನವರಲ್ಲಿ ಕುತೂಹಲ ಮೂಡಿಸುತ್ತಿದೆ. ಅದೇ ಹಳೇ ರೀತಿಯ ಸಿನಿಮಾಗಳಿಂದ ಹೊರಬರಲು ಬಾಲಿವುಡ್ ಮಂದಿಯೂ ಹೋರಾಟ ನಡೆಸುತ್ತಿದ್ದಾರೆ. ಇನ್ನು ನಮ್ಮಲ್ಲಿ ನಿರ್ದೇಶಕರು ಒಳ್ಳೆ ಸಿನಿಮಾ ಮಾಡಿದರೂ, ಮುಂದಿನ ಚಿತ್ರಕ್ಕೆ ನಿರ್ಮಾಪಕರನ್ನು ಹುಡುಕಾಡುವ ಸ್ಥಿತಿ ತಪ್ಪಿದ್ದಲ್ಲ. ಹೀಗಾಗಿ ಬೇರೆ ಚಿತ್ರರಂಗಗಳಲ್ಲಿ ಅವಕಾಶ ಸಿಕ್ಕಾಗ ಹೋಗುವುದು ಕಾಮನ್' ಎನ್ನುತ್ತಾರೆ.
ದಶಕದ ಬಳಿಕ ಮರಳಿದ ರಾಮ್
"ತಿಥಿ' ಚಿತ್ರದ ಮೂಲಕ ಚೊಚ್ಚಲ ನಿರ್ದೇಶನದಲ್ಲೇ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ರಾಮ್ ರೆಡ್ಡಿ, ಆ ಬಳಿಕ ಮತ್ತೆ ಕನ್ನಡದಲ್ಲಿ ಸಿನಿಮಾ ಮಾಡಿರಲಿಲ್ಲ. ಇದೀಗ ಹತ್ತು ವರ್ಷಗಳ ನಂತರ ಬಾಲಿವುಡ್ನಲ್ಲಿ "ಜುಗ್ನುಮಾ: ದ ಫೇಬಲ್' ಮೂಲಕ ಮತ್ತೆ ವಾಪಸ್ಸಾಗಿದ್ದಾರೆ. ಕಳೆದ ಸೆ. 12ರಂದು ಬಿಡುಗಡೆಯಾದ ಈ ಡ್ರಾಮಾದಲ್ಲಿ ಮನೋಜ್ ಬಾಜಪೈ, ದೀಪಕ್ ಡೋಬ್ರಿಯಾಲ್, ತಿಲೋತ್ತಮಾ ಶೋಮ್, ಪ್ರಿಯಾಂಕಾ ಬೋಸ್ ಅವರಂತಹ ಟಾನುಟಿ ಕಲಾವಿದರು ನಟಿಸಿದ್ದರು. ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರವು ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿಗಳನ್ನೂ ಗೆದ್ದಿದೆ.