ಸಿನಿವಾಣಿ

ಮತ್ತೆ ನಿರ್ಮಾಣದತ್ತ ಹಾಸ್ಯನಟ ಮಿತ್ರ ಚಿತ್ತ ; ಮುಂದಿನ ವರ್ಷ ಮೆಗಾ ಸಿನಿಮಾ ಲಾಂಚ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಕನ್ನಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಾಸ್ಯನಟ ಮಿತ್ರ, ಕಳೆದ ಕೆಲ ವರ್ಷಗಳಿಂದ ಅಪರೂಪವಾಗಿದ್ದರು. ಆದರೆ, ಕಳೆದ ವರ್ಷ ಅವರು ಮಾಡಿಸಿದ ಫೋಟೋಶೂಟ್​ ಅವರನ್ನು ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ. ಸೋಮವಾರ ಹುಟ್ಟುಹಬ್ಬ ಆಚರಿಸಿಕೊಂಡ ನಟ, ಈಗ ಮತ್ತೆ ಬಿಜಿಯಾಗಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ "ಕರಾವಳಿ', "ಲ್ಯಾಂಡ್​ಲಾರ್ಡ್​', "ಕರಳೆ' ಸೇರಿ ಇನ್ನೂ ಹೆಸರಿಡದ ರಾಜವರ್ಧನ್​ ನಿರ್ಮಿಸುತ್ತಿರುವ ಹೊಸ ಚಿತ್ರದ ಪೋಸ್ಟರ್​ ಬಿಡುಗಡೆ ಮಾಡಿ ತಂಡಗಳು ಶುಭಹಾರೈಸಿವೆ.

"ಫೋಟೋಶೂಟ್​ ಬಳಿಕ ಉತ್ತಮ ಅವಕಾಶಗಳು ಬರುತ್ತಿವೆ. ಈಗ ಮತ್ತೆ ಹಳೆ ಮಿತ್ರ ಆಗಿದ್ದೇನೆ. 2024 ಮತ್ತು 2025 ತುಂಬ ಒಳ್ಳೆ ವರ್ಷಗಳಾಗಿವೆ. "ಕರಾವಳಿ', "ಲ್ಯಾಂಡ್​ಲಾರ್ಡ್​', "ಕರಳೆ' ಜತೆಗೆ "ಕಮಲ್​ ಶ್ರೀದೇವಿ', "ಮಹಾನ್​', "ಮಿ. ಜ್ಯಾಕ್​', "ಲಕ್ಷ್ಮೀಪತಿ' ಸೇರಿ ಇನ್ನೂ ಕೆಲ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ.

ಮುಂದಿನ ವರ್ಷ ಮೆಗಾ ಸಿನಿಮಾ

ಪಿ.ಸಿ. ಶೇಖರ್​ ನಿರ್ದೇಶಿಸಿದ್ದ 2017ರಲ್ಲಿ ಬಿಡುಗಡೆಯಾಗಿದ್ದ "ರಾಗಾ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಮಿತ್ರ, ಆ ಸಿನಿಮಾ ಮೂಲಕ ನಿರ್ಮಾಪಕ ಕೂಡ ಆಗಿದ್ದರು. ಇದೀಗ ಕಮ್​ಬ್ಯಾಕ್​ನಲ್ಲಿ ನಟನೆಯಲ್ಲಿ ಬಿಜಿಯಾಗಿರುವ ಅವರು, 2026ರಲ್ಲಿ ಮತ್ತೊಮ್ಮೆ ಸಿನಿಮಾ ನಿರ್ಮಾಣ ಮಾಡಲು ಸಿದ್ಧತೆ ನಡೆಸಿದ್ದಾರೆ . ಈ ಬಗ್ಗೆ, "ಮುಂದಿನ ವರ್ಷ ನಿರ್ಮಾಣಕ್ಕೆ ಹೈಕಾಲಿದ್ದೇನೆ. "ರಾಗಾ' ಬಳಿಕ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಲಿದ್ದೇನೆ. 2026ರ ಮಧ್ಯದಲ್ಲಿ ಸಿನಿಮಾ ಘೋಷಿಸಲಿದ್ದೇವೆ. ಕನ್ನಡದ ದೊಡ್ಡ ಸ್ಟಾರ್​ ಒಬ್ಬರು ನಟಿಸಲಿದ್ದು, ಅವರ ಡೇಟ್​ಗಾಗಿ ಕಾಯುತ್ತಿದ್ದೇನೆ. ಕನ್ನಡದಲ್ಲೇ ಮೆಗಾ ಬಜೆಟ್​ನಲ್ಲಿ ಈ ಸಿನಿಮಾ ಮಾಡುವ ಪ್ಲ್ಯಾನ್​ ಇದೆ' ಎಂದು ಮಾಹಿತಿ ನೀಡುತ್ತಾರೆ.