ಸಿನಿವಾಣಿ

ಏನ್ ಬಿಜಿ ಸ್ವಾಮಿ ನಿಖಿತಾ!: ನಾಲ್ಕು ತೆರೆಗೆ ಬರಲು ರೆಡಿ, ಕೈಯಲ್ಲಿವೆ ಮೂರು ಚಿತ್ರಗಳು

ಬೆಂಗಳೂರು: ಕನ್ನಡದ ‘ಇದು ಆಕಾಶವಾಣಿ ಬೆಂಗಳೂರು ನಿಲಯ’, ‘ಜಲ್ಲಿಕಟ್ಟು’ ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ನಿಖಿತಾ ಸ್ವಾಮಿಗೆ 2024 ಬಹು ಮಹತ್ವದ ವರ್ಷವಾಗಿದೆ. ಏಕೆಂದರೆ, ಅವರು ನಟಿಸಿರುವ ನಾಲ್ಕು ಚಿತ್ರಗಳು ಈ ವರ್ಷ ಬಿಡುಗಡೆಗೆ ಸಿದ್ಧವಾಗಿವೆ. ಜತೆಗೆ ಮೂರು ಸಿನಿಮಾಗಳು ನಿಖಿತಾ ಕೈಯಲ್ಲಿವೆ. ಜತೆಗೆ ಸ್ವಂತ ಉದ್ಯಮಕ್ಕೆ ಪ್ರಾರಂಭಿಸಲು ಅವರು ತಯಾರಿ ನಡೆಸಿದ್ದಾರೆ. ಹೀಗಾಗಿ ಈ ವರ್ಷ ಅವರಿಗೆ ಸಾಕಷ್ಟು ಖುಷಿ ನೀಡಿದ್ದು, ಆ ಬಗ್ಗೆ ‘ವಿಜಯವಾಣಿ’ ಜತೆ ಖುಷಿ ಹಂಚಿಕೊಂಡಿದ್ದಾರೆ.

ನಾಲ್ಕು ಸಿನಿಮಾಗಳು ಬಿಡುಗಡೆ ಸಿದ್ಧ: ನಿಖಿತಾ ಸ್ವಾಮಿ ನಟಿಸಿರುವ ‘ಅನಾಥ’, ‘ಫಸ್ಟ್ ನೈಟ್ ವಿಥ್ ದೆವ್ವ’, ‘ಟಕೀಲಾ’ ಹಾಗೂ ‘ಗಂಗೆ-ಗೌರಿ’ ಚಿತ್ರಗಳು ಸದ್ಯ ಬಿಡುಗಡೆಗೆ ಸಿದ್ಧವಾಗಿವೆ. ‘ಅನಾಥ’ ಇದೇ 28ರಂದು ರಿಲೀಸ್ ಆಗಲಿದ್ದು, ‘‘ಅನಾಥ’ ಕಾಲೇಜು ಹುಡುಗ- ಹುಡುಗಿಯ ಲವ್‌ಸ್ಟೋರಿ. ಜತೆಗೆ ಸಸ್ಪೆನ್ಸ್ ಹಾಗೂ ಮರ್ಡರ್ ಮಿಸ್ಟ್ರಿ ಕಥೆಯಿದೆ. ನನ್ನದು ಕಾಲೇಜು ಹುಡುಗಿಯ ಪಾತ್ರ. ಇನ್ನು ಪ್ರಥಮ್ ನಟನೆಯ ‘ಸ್ಟ್ ನೈಟ್ ವಿಥ್ ದೆವ್ವ’ ಹಾಗೂ ಧರ್ಮ ಕೀರ್ತಿರಾಜ್‌ರ ‘ಟಕೀಲಾ’ ಚಿತ್ರಗಳಲ್ಲಿ ಹೊಸದಾಗಿ ಮದುವೆಯಾಗಿರುವ ವಧುವಿನ ಪಾತ್ರ ಮಾಡುತ್ತಿದ್ದೇನೆ. ಭಕ್ತಿಪ್ರಧಾನ ‘ಗಂಗೆ-ಗೌರಿ’ಯಲ್ಲಿ ಗೌರಿಯಾಗಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ.

ಖಾಕಿಯಲ್ಲಿ ಖಡಕ್ ಹುಡುಗಿ: ‘ರಾವನ್’ ಸಿನಿಮಾದಲ್ಲಿ ಚಾಲೆಂಜಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಖುಷಿಯಾಗಿಯೇ ಹೇಳಿಕೊಳ್ಳುವ ನಿಖಿತಾ, ‘ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದೇನೆ. ಅದಕ್ಕಾಗಿ ತುಂಬ ವರ್ಕೌಟ್ ಮಾಡಿದ್ದೇನೆ. ಅಷ್ಟೇ ಖಡಕ್ ಸಂಭಾಷಣೆ ಕೂಡ ಚಿತ್ರದಲ್ಲಿದೆ. ‘ಉಗ್ರಾವತಾರ’ ನಿರ್ದೇಶಕ ಗುರುಮೂರ್ತಿ ಅವರ ಹೊಸ ಪ್ರಾಜೆಕ್ಟ್‌ಗೆ ಸಹಿ ಮಾಡಿದ್ದೇನೆ. ಅದು ಸದ್ಯದಲ್ಲಿಯೇ ಮುಹೂರ್ತ ಕಾಣಲಿದೆ. ಸದ್ಯ ನಾಲ್ಕು ಸ್ಕ್ರಿಪ್ಟ್ ಕೇಳಿದ್ದು, ಒಂದು ಒಪ್ಪಿಗೆಯಾಗಿದೆ, ಇನ್ನೊಂದು ಮಾತುಕತೆ ಹಂತದಲ್ಲಿದೆ. ಇನ್ನೆರೆಡು ನಿರ್ಧರಿಸಬೇಕಷ್ಟೇ’ ಎಂದು ಹೇಳಿಕೊಳ್ಳುತ್ತಾರೆ.