ಸಿನಿವಾಣಿ

ಈ ಸೆಲೆಬ್ರಿಟಿಗೆ ಸಿಕ್ತು ಆನ್​ಲೈನ್​ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿ ಪಟ್ಟ; ಅದಕ್ಕೆ ಕಾರಣ ಮಾರಕ ಕರೊನಾ ವೈರಸ್​!

ಮುಂಬೈ: ಇತ್ತೀಚೆಗಷ್ಟೇ ಕರೊನಾದಿಂದ ಹೆಚ್ಚು ಸುದ್ದಿ ಮಾಡಿದ ಬಾಲಿವುಡ್​ ಸೆಲೆಬ್ರಿಟಿಗಳ ಪೈಕಿ ಗಾಯಕಿ ಕನ್ನಿಕಾ ಕಪೂರ್​ ಮೊದಲ ಸ್ಥಾನದಲ್ಲಿದ್ದಾರೆ. ಇದೀಗ ಅದನ್ನು ಹೊರತುಪಡಿಸಿ ಇನ್ನೊಂದು ಕಾರಣಕ್ಕೆ ಮೊದಲ ಸ್ಥಾನದಲ್ಲಿದ್ದಾರೆ. ಆನ್​ಲೈನ್​ನಲ್ಲಿ ಅತಿ ಹೆಚ್ಚು ಸರ್ಚ್​ ಮಾಡಲ್ಪಟ್ಟ ಸೆಲೆಬ್ರಿಟಿಯಾಗಿ ಪ್ರಿಯಾಂಕಾ ಚೋಪ್ರಾ ಅವರನ್ನೇ ಹಿಂದಿಕ್ಕಿದ್ದಾರೆ ಕನ್ನಿಕಾ.
ಹೌದು, ಯಾಹೂ ಇಂಡಿಯಾ ಒಂದಷ್ಟು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕನ್ನಿಕಾ ಅತಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಯಾಗಿದ್ದಾರೆ. ಅದಕ್ಕೆ ಕಾರಣ ಅವರಿಗೆ ಅಂಟಿಕೊಂಡಿದ್ದ ಕರೊನಾ ಅಂದರೂ ತಪ್ಪಾಗದು! ಲಂಡನ್​ನಿಂದ ಕರೊನಾ ಮಾರಿಯನ್ನು ಹೊತ್ತು ತಂದು ಒಂದಷ್ಟು ಕಾಲ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಆಹಾರವಾಗಿದ್ದ ಕನ್ನಿಕಾ, ಅಷ್ಟೇ ಉದ್ಧಟತನ ಮೆರೆದು ನೆಟ್ಟಿಗರಿಗೆ ಟಾರ್ಗೇಟ್​ ಆಗಿದ್ದರು. ಆ ಒಂದು ಕಾರಣಕ್ಕೆ ಯಾರು ಈ ಕನ್ನಿಕಾ ಕಪೂರ್​ ಎಂಬುದನ್ನು ಪತ್ತೆ ಹಚ್ಚಲು ಹೆಚ್ಚು ಜನ ಅವರ ಪ್ರೊಫೈಲ್​ ವೀಕ್ಷಿಸಿದ್ದಾರೆ. ಈ ಮೂಲಕ ಪ್ರಿಯಾಂಕಾ ಚೋಪ್ರ ಅವರನ್ನು ಹಿಂದಿಕ್ಕಿದ್ದಾರೆ. ಇನ್ನುಳಿದಂತೆ ಮೂರನೇ ಸ್ಥಾನದಲ್ಲಿ ದಿಶಾ ಪಟಾಣಿ, ನಾಲ್ಕನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್​ ಐದನೇ ಸ್ಥಾನದಲ್ಲಿದ್ದಾರೆ.
ಇತ್ತ ಲಾಕ್​ಡೌನ್​ ಹಿನ್ನೆಲೆಯಲ್ಲಿ ರಾಮಾಯಣ ಧಾರಾವಾಹಿ ಅತಿ ಹೆಚ್ಚು ಹುಡುಕಲ್ಪಟ್ಟ ಮನರಂಜನಾ ಕಾರ್ಯಕ್ರಮವಾಗಿದೆ. ಇದರಿಂದಾಗಿ ಆ ಧಾರಾವಾಹಿಯಲ್ಲಿ ಪ್ರಧಾನ ಪಾತ್ರ ನಿಭಾಯಿಸಿದ್ದ ಅರುಣ್​ ಗೌಳಿ, ದೀಪಿಕಾ ಚಿಕ್ಲಿಯಾ, ಸುನೀಲ್​ ಲಹರಿ, ಧಾರಾ ಸಿಂಗ್​, ಅರವಿಂದ್​ ತ್ರಿವೇದಿ ಹೆಸರುಗಳೂ ಸಹ ಲಾಕ್​ಡೌನ್​ ಹೊತ್ತಲ್ಲಿ ಹೆಚ್ಚು ರಿಂಗಣಿಸಿದವು. (ಏಜೆನ್ಸೀಸ್​)