ಸಿನಿವಾಣಿ

ಕಂಗನಾ ವಿರುದ್ಧ ಡ್ರಗ್ಸ್ ಸೇವನೆ ಆರೋಪ- ತನಿಖೆ ನಡೆಸೋಕೆ ಮುಂಬೈ ಪೊಲೀಸ್​ಗೆ ಠಾಕ್ರೆ ಸರ್ಕಾರದ ಆದೇಶ

ಮುಂಬೈ: ಡ್ರಗ್ಸ್ ಸೇವನೆ ಕುರಿತಾಗಿ ಕಂಗನಾ ರಾಣಾವತ್ ನೀಡಿದ್ದ ಹೇಳಿಕೆ ಮತ್ತು ಅವರ ವಿರುದ್ಧದ ಡ್ರಗ್ಸ್​ ಸೇವನೆಯ ಆರೋಪದ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು ಎಂದು ಉದ್ಧವ್ ಠಾಕ್ರೆ ಸರ್ಕಾರ ಶುಕ್ರವಾರ ಮುಂಬೈ ಪೊಲೀಸ್​ಗೆ ಆದೇಶ ನೀಡಿದೆ. ಕಂಗನಾ ಕೂಡ ನಿಷೇಧಿತ ಮಾದಕವಸ್ತು, ನಾರ್ಕೋಟಿಕ್ಸ್ ಡ್ರಗ್ಸ್​ಗಳನ್ನು ತೆಗೆದುಕೊಳ್ಳುತ್ತಿದ್ದರು ಎಂಬ ಆರೋಪದ ಕಾರಣ ಅದರ ತನಿಖೆಯಾಗಬೇಕು ಎಂದು ಸರ್ಕಾರ ಹೇಳಿದೆ.

ಶಿವಸೇನೆ-ಕಾಂಗ್ರೆಸ್​-ಎನ್​ಸಿಪಿ ಸರ್ಕಾರದ ಆದೇಶ ಮುಂಬೈ ಪೊಲೀಸ್ ಕಚೇರಿ ತಲುಪಿದ್ದು, ಕ್ರೈಂ ಬ್ರಾಂಚ್ ಇದರ ತನಿಖೆ ನಡೆಸಲಿದೆ. ಹಿರಿಯ ನಟ ಶೇಖರ್ ಸುಮನ್ ಅವರ ಪುತ್ರ ನಟ ಅಧ್ಯಾಯನ್ ಸುಮನ್ ಅವರು ಕಂಗನಾ ವಿರುದ್ಧ ಡ್ರಗ್ಸ್ ಸೇವನೆಯ ಆರೋಪ ಮಾಡಿದ್ದರು. ಟಿವಿ ಸಂದರ್ಶನ ಒಂದರಲ್ಲಿ ಅವರು ಈ ಆರೋಪ ಮಾಡಿದ್ದರು. ಇದನ್ನು ಆಧರಿಸಿ ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದು ಮಂಗಳವಾರ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್​ ಹೇಳಿದ್ದರು. ಅದಕ್ಕೆ ಸಂಬಂಧಿಸಿದ ಆದೇಶ ಇಂದು ಜಾರಿಯಾಗಿದೆ.

ಅಧ್ಯಾಯನ್ ಸುಮನ್ ಮತ್ತು ಕಂಗನಾ ರಾಣಾವತ್​ಗೆ ಈ ಸಂಬಂಧ ಸಮನ್ಸ್ ಜಾರಿಗೊಳಿಸುವುದಕ್ಕೆ ಮುಂಬೈ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಶಿವಸೇನಾ ಶಾಸಕ ಪ್ರತಾಪ್ ಸರ್​ನಾಯ್ಕ್ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಅಧ್ಯಾಯನ್ ಅವರ ಸಂದರ್ಶನದ ಆರೋಪದ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು. (ಏಜೆನ್ಸೀಸ್)