ಮುಂಬೈ: 'ತಲೈವಿ' ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ತಮ್ಮ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ಕಂಗನಾ, ಇದೀಗ ಆ ತೂಕ ಇಳಿಸಿಕೊಳ್ಳುವುದಕ್ಕೆ ಪ್ರಯತ್ನಪಡುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮುಂದಿನ ಚಿತ್ರಗಳಿಗಾಗಿ ವಿಭಿನ್ನ ಪಾತ್ರಗಳನ್ನು ಮಾಡುತ್ತಿರುವುದರಿಂದ ಅದಕ್ಕೆ ದೈಹಿಕ ತರಬೇತಿಯನ್ನು ಪಡೆಯುತ್ತಿದ್ದಾರೆ.
'ತಲೈವಿ' ಚಿತ್ರದ ನಂತರ ಕಂಗನಾ ರಣಾವತ್ ಅವರು 'ತೇಜಸ್' ಮತ್ತು 'ಧಾಕ್ಕಡ್' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಗಳಲ್ಲಿನ ತಮ್ಮ ಪಾತ್ರಕ್ಕೆ ಅವರು ದೈಹಿಕ ತರಬೇತಿಯನ್ನು ಪ್ರಾರಂಭಿಸಿದ್ದು, ಬಾಕ್ಸಿಂಗ್ ತರಬೇತಿ ಪಡೆಯುತ್ತಿರುವ ವಿಡಿಯೋವೊಂದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ನನ್ನ ಮುಂದಿನ ಚಿತ್ರಗಳಿಗಾಗಿ ಆಕ್ಷನ್ ತರಬೇತಿ ಶುರು ಮಾಡಿದ್ದೇನೆ. 'ತೇಜಸ್ ಚಿತ್ರದಲ್ಲಿ ನಾನು ಫೌಜಿಯ ಪಾತ್ರ ಮಾಡುತ್ತಿದ್ದೇಬೆ'. ಇನ್ನು 'ಧಾಕ್ಕಡ್' ಚಿತ್ರದಲ್ಲಿ ಮೊದಲ ಬಾರಿಗೆ ಸ್ಪೈ ಆಗಿ ಕಾಣಿಸಿಕೊಂಡಿದ್ದೇನೆ. 'ಮಣಿಕರ್ಣಿಕಾ' ಚಿತ್ರದ ಯಶಸ್ಸಿನ ನಂತರ ಬಾಲಿವುಡ್ ನನಗೆ ಸಾಕಷ್ಟು ಕೊಟ್ಟಿರಬಹುದು. ನಾನು ಸಹ ಬಾಲಿವುಡ್ಗೆ ಮೊದಲ ಆಕ್ಷನ್ ಹೀರೋಯಿನ್ ಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ' ಎಂದು ಕಂಗನಾ ಹೇಳಿಕೊಂಡಿದ್ದಾರೆ.
'ತಲೈವಿ' ಚಿತ್ರದಲ್ಲಿ ಜಯಲಲಿತಾ ಅವರ ಪಾತ್ರವನ್ನು ಕಂಗನಾ ಮಾಡುತ್ತಿದ್ದು, ಪಾತ್ರಕ್ಕಾಗಿ ಒಂದಿಷ್ಟು ತೂಕ ಹೆಚ್ಚಿಸಿಕೊಂಡಿದ್ದರು. ಈಗ ಅದನ್ನು ಇಳಿಸುವುದರ ಜತೆಗೆ ಮೊದಲಿನ ಸೈಜ್ಗೆ ಹೋಗಬೇಕಾಗಿದೆ ಎಂದು ಕಂಗನಾ ಇತ್ತೀಚೆಗಷ್ಟೇ ಹೇಳಿಕೊಂಡಿದ್ದಾರೆ.