ಸಿನಿವಾಣಿ

ಕಂಗನಾ ಪಾಲಿಗೆ ಇಂದು ವಿಶೇಷವಾದ ದಿನ ... ಯಾಕಿರಬಹುದು?

ಮನಾಲಿ: ಲಾಕ್​ಡೌನ್​ ಘೋಷಣೆಯಾಗಿದ್ದೇ ಆಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದ ಒಬ್ಬ ಬಾಲಿವುಡ್​ ಸೆಲೆಬ್ರಿಟಿ ಎಂದರೆ ಅದು ಕಂಗನಾ ರಣಾವತ್​. ಕಂಗನಾ ಕಳೆದ ಆರೇಳು ತಿಂಗಳುಗಳ ಕಾಲ ಸೋಷಿಯಲ್​ ಮೀಡಿಯಾದಲ್ಲಿ ಏನೆಲ್ಲಾ ಮಾಡಿದರು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಬಹುಶಃ ಮುಂದಿನ ದಿನಗಳಲ್ಲಿ ಕಂಗನಾ ಅಷ್ಟೊಂದು ಸಕ್ರಿಯವಾಗಿ ಇರುವುದಕ್ಕೆ ಸಾಧ್ಯವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ, ಕಂಗನಾ ಮತ್ತೊಮ್ಮೆ ಕೆಲಸಕ್ಕೆ ಹೊರಟು ನಿಂತಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ಕಂಗನಾ ಒಂದಿಷ್ಟು ಕಥೆಗಳನ್ನು ಕೇಳಿದ್ದು, ಮುಂದಿನ ದಿನಗಳಲ್ಲಿ ಆ ಚಿತ್ರಗಳಲ್ಲಿ ನಟಿಸಿದ್ದಾರೆ.

ಅದಕ್ಕೂ ಮೊದಲು, ಕಂಗನಾ ಈ ಹಿಂದೆ ಒಪ್ಪಿಕೊಂಡ ಚಿತ್ರಗಳನ್ನು ಮುಗಿಸಬೇಕಿದೆ. ಅದರ ಮೊದಲ ಹಂತವಾಗಿ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಕುರಿತ ಬಯೋಪಿಕ್​ ಕೆಲಸಗಳಲ್ಲಿ ಮೊದಲು ತೊಡಗಿಸಿಕೊಳ್ಳಲಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಇಂದು ನನ್ನ ಪಾಲಿಗೆ ಬಹಳ ವಿಶೇಷಾದ ದಿನ. ಏಕೆಂದರೆ, ಏಳು ತಿಂಗಳ ನಂತರ 'ತಲೈವಿ' ಚಿತ್ರದ ಕೆಲಸಗಳಿಗಾಗಿ ದಕ್ಷಿಣ ಭಾರತಕ್ಕೆ ಹೊರಟಿದ್ದೇನೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ ಸದಾ ನನ್ನ ಮೇಲಿರಲಿ' ಎಂದು ಅವರು ಹೇಳಿಕೊಂಡಿದ್ದಾರೆ. ಹಾಗೆಯೇ ಒಂದಿಷ್ಟು ಹೊಸ ಸೆಲ್ಫಿಗಳನ್ನು ಅವರು, ತಮ್ಮ ಅಭಿಮಾನಿಗಳೊಂದಿಗೆ ಶೇರ್​ ಮಾಡಿಕೊಂಡಿದ್ದಾರೆ.