ಮುಂಬೈ: ಬಾಲಿವುಡ್ ನಟಿ ಕಂಗನಾ, ಯೋಗ ಬಗ್ಗೆ ಆಗಾಗ ಮಾತಾಡುತ್ತಲೇ ಇರುತ್ತಾರೆ. ಮೂರು ದಿನಗಳ ಹಿಂದಷ್ಟೇ, ಆಪರೇಷನ್ ಇಲ್ಲದೆ ಯೋಗದಿಂದ ತಮ್ಮ ತಾಯಿಗಿದ್ದ ಅನಾರೋಗ್ಯವನ್ನು ಹೇಗೆ ಸರಿಪಡಿಸಿದೆ ಎಂದು ಅವರು ಹೇಳಿಕೊಂಡಿದ್ದರು. ಈಗ ಅವರು ತಮ್ಮ ಅಕ್ಕನ ಆಸಿಡ್ ಅಟ್ಯಾಕ್ ಬಗ್ಗೆ ಮಾತನಾಡಿದ್ದಾರಂತೆ. ಅಕ್ಕನನ್ನು ಆ ಆಘಾತದಿಂದ ಹೊರತರುವುದಕ್ಕೆ ಯೋಗ ಎಂತಹ ಮಹತ್ವದ ಪಾತ್ರ ವಹಿಸಿತು ಎಂದು ಅವರು ಹೇಳಿಕೊಂಡಿದ್ದಾರೆ.
ವಿಶ್ವ ಯೋಗ ದಿನದ ಪ್ರಯುಕ್ತ ಯೋಗದ ಬಗ್ಗೆ ಮಾತನಾಡಿರುವ ಅವರು, 'ಈ ವಿಷಯದಲ್ಲಿ ನನ್ನಕ್ಕ ರಂಗೋಲಿ ಎಲ್ಲರಿಗೂ ಸ್ಫೂರ್ತಿಯಾಗಿ ನಿಲ್ಲುತ್ತಾಳೆ. ಅವಳು 21 ವರ್ಷದವಳಾಗಿದ್ದಾಗ ಒಬ್ಬ ರೋಡ್ಸೈಡ್ ರೋಮಿಯೋ, ಆಕೆಯ ಮುಖಕ್ಕೆ ಆಸಿಡ್ ಹಾಕಿದ್ದ. ಅದು ಆಕೆಯ ಮುಖದ ಅರ್ಧ ಭಾಗವನ್ನು ಸುಟ್ಟು ಹಾಕಿತ್ತು. ಅಷ್ಟೇ ಅಲ್ಲ, ಒಂದು ಕಣ್ಣಿನ ದೃಷ್ಟಿಯೇ ಹೊರತು ಹೋಗಿತ್ತು. ಮುಂದಿನ ಮೂರು ವರ್ಷಗಳಲ್ಲಿ, ಆಕೆಯ ಮುಖವನ್ನು ಸರಿ ಮಾಡುವುದಕ್ಕೆ 53 ಸರ್ಜರಿಗಳನ್ನು ಮಾಡಬೇಕಾಯಿತು. ಇದೆಲ್ಲ ಒಂದು ಕಡೆಯಾದರೆ, ನನಗೆ ಆಕೆಯ ಮಾನಸಿಕ ಸ್ಥಿತಿಯ ಬಗ್ಗೆ ಬಹಳ ಆತಂಕವಾಗಿತ್ತು. ಆಕೆ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಳು. ಸುಮ್ಮನೆ ನೋಡುತ್ತಾ ಕುಳಿತಿರುತ್ತಿದ್ದಳು' ಎಂದು ಕಂಗನಾ ಹೇಳಿಕೊಂಡಿದ್ದಾರೆ.
ಅದಕ್ಕೂ ಮುನ್ನ ಕಂಗನಾ ಅವರ ಅಕ್ಕನ ಎಂಗೇಜ್ಮೆಂಟ್ ಒಬ್ಬ ಏರ್ಫೋರ್ಸ್ ಅಧಿಕಾರಿಯ ಜತೆಗೆ ಆಗಿತ್ತಂತೆ. 'ಒಂದು ದಿನ ಆ ಹುಡುಗ ಬಂದು ಅಕ್ಕನನ್ನು ನೋಡಿದ. ಆಕೆಯ ಸುಟ್ಟ ಮುಖವನ್ನು ನೋಡಿದ ಅವನು, ಮತ್ತೆಂದೂ ವಾಪಸ್ಸು ಬರಲಿಲ್ಲ. ಆಗಲೂ ಅವಳು ಒಂದೇ ಒಂದು ಮಾತನ್ನೂ ಆಡಲಿಲ್ಲ. ವೈದ್ಯರು ಆಕೆಗೆ ಒಂದಿಷ್ಟು ಚಿಕಿತ್ಸೆಯನ್ನೇನೋ ಕೊಟ್ಟರು. ಆದರೆ, ಆಕೆಯನ್ನು ಮೊದಲ ಸ್ಥಿತಿಗೆ ತರುವುದು ಅಷ್ಟು ಸುಲಭವಾದ ವಿಷಯವಾಗಿರಲಿಲ್ಲ' ಎಂದಿದ್ದಾರೆ ಕಂಗನಾ.
ಇಂಥ ಸಂದರ್ಭದಲ್ಲಿ ಅವರ ನೆರವಿಗೆ ಬಂದಿದ್ದು ಯೋಗವಂತೆ. 'ಆಗ ನಾನು ಯೋಗ ಕಲಿಯುತ್ತಿದ್ದೆ. ನಮ್ಮ ಗುರುಗಳಾದ ಸೂರ್ಯನಾರಾಯಣ್ ಅವರ ಜತೆಗೆ ಯೋಗಿ ಅಭ್ಯಾಸ ಮಾಡುತ್ತಿದ್ದೆ. ಅದರಿಂದ ಈ ತರಹದ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ಗೊತ್ತಿರಲಿಲ್ಲ. ಅಕ್ಕ ಮನೆಯಲ್ಲಿ ಸುಮ್ಮನೆ ಕುಳಿತಿರಬಾರದು ಎಂಬ ಕಾರಣಕ್ಕೆ, ಅವಳನ್ನು ಜತೆಗೆ ಕರೆದುಕೊಂಡು ಹೋಗುತ್ತಿದ್ದೆ. ನನ್ನ ಜತೆಗೆ ಬರುತ್ತಾ ಬರುತ್ತಾ, ಅವಳು ಕ್ರಮೇಣ ಯೋಗ ಕಲಿತಳು. ಅಭ್ಯಾಸ ಮಾಡುತ್ತಾ ಅವಳಲ್ಲಿ ಸಾಕಷ್ಟು ಬದಲಾವಣೆ ಆಯಿತು. ಮುಂಚಿನ ಸ್ಥಿತಿಗೆ ಮರಳುವುದಷ್ಟೇ ಅಲ್ಲ, ಆಕೆಗೆ ಇದ್ದ ದೃಷ್ಟಿದೋಷವೂ ಪರಿಹಾರವಾಯಿತು. ಯೋಗದಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಇದೆ ಎಂದು ಆ ನಂತರ ಗೊತ್ತಾಯಿತು' ಎಂದು ಕಂಗನಾ ಹೇಳಿದ್ದಾರೆ.