ಸಿನಿವಾಣಿ

ಆಕೆ ಸೂಪರ್​ಸ್ಟಾರ್​; ಆತ ಸಾಮಾನ್ಯ ನಿರೂಪಕ ...

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ನಂತರ ಬಾಲಿವುಡ್​ ನಿರ್ದೇಶಕ ಕರಣ್​ ಜೋಹಾರ್​ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಪ್ರಮುಖವಾಗಿ, ಕರಣ್​ ಜೋಹಾರ್​ ತಮಗೆ ಬೇಕಾದ್ದವನ್ನು ಬೆಳೆಸಿ, ಸ್ವಜನಪಕ್ಷಪಾತವನ್ನು ಪೋಷಿಸಿದ್ದರಿಂದ, ಸುಶಾಂತ್​ರಂತಹ ಯುವಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಅಭಿಪ್ರಾಯ ಎಲ್ಲಡೆ ಇರುವುದರಿಂದ, ಜನ ಕರಣ್​ ವಿರುದ್ಧ ತಿರುಗಿಬಿದ್ದಿದ್ದಾರೆ.

ಇನ್ನೊಂದು ಕಡೆ, ಸುಶಾಂತ್​ ಸಾವಿಗೆ ಕರಣ್​ ಅವರನ್ನು ದೂಷಿಸುವುದು ಸರಿಯಲ್ಲ ಎಂದು ರಾಮ್​ಗೋಪಾಲ್​ ವರ್ಮಾ, ಸ್ವರಾ ಭಾಸ್ಕರ್​ ಮುಂತಾದ ಸೆಲೆಬ್ರಿಟಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಸ್ವರಾ ಭಾಸ್ಕರ್​, ಕಾರ್ಯಕ್ರಮವೊಂದರಲ್ಲಿ ತಾವು ಕರಣ್​ ಅವರನ್ನು ನೆಪೋಟಿಸಂ ಕುರಿತಾಗಿ ಪ್ರಶ್ನೆ ಮಾಡಿದ್ದು, ಈ ಕುರಿತು ಅವರು ಪ್ರಾಮಾಣಿಕವಾದ ಉತ್ತರ ನೀಡಿದ್ದರು ಎಂದು ಬರೆದುಕೊಂಡಿದ್ದಾರೆ. ಕರಣ್​ ಬೇಕಾದರೆ ನನ್ನ ಪ್ರಶ್ನೆಯನ್ನು ಕಿತ್ತು ಹಾಕಿಸಬಹುದಿತ್ತಾದರೂ, ಅವರು ಹಾಗೆ ಮಾಡಲಿಲ್ಲ ಎಂದು ಕರಣ್​ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದರ ವಿರುದ್ಧ ಕಂಗನಾ ರಣಾವತ್​ ಅವರ ಪ್ರಚಾರದ ತಂಡ ತಿರುಗಿಬಿದ್ದಿದೆ. ಏಕೆಂದರೆ, ಇದುವರೆಗೂ ಸ್ವಜನಪಕ್ಷಪಾತದ ಬಗ್ಗೆ ಮೊದಲು ಕರಣ್​ ವಿರುದ್ಧ ಆರೋಪ ಹೊರಿಸಿದವರು ಕಂಗನಾ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಕಂಗನಾಗಿಂಥ ಮುನ್ನ ಸ್ವಜನಪಕ್ಷಪಾತದ ಕುರಿತಾಗಿ ಕರಣ್​ ಅವರನ್ನು ಪ್ರಶ್ನಿಸಿದ್ದು ತಾನು ಎಂದು ಸ್ವರಾ ಹೇಳಿಕೊಂಡಿರುವುದು ಕಂಗನಾ ಮತ್ತು ಅವರ ತಂಡವನ್ನು ಕೆರಳಿಸಿದೆ. ಅದೇ ಕಾರಣಕ್ಕೆ, ಕಂಗನಾ ಅವರ ತಂಡದವರು ಕರಣ್​ ಮತ್ತು ಸ್ವರಾ ಇಬ್ಬರನ್ನೂ ಝಾಡಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಕಂಗನಾ ತಂಡ, 'ಸ್ವರಾ ಅವರೇ ನೀವು ಕರಣ್​ ಜೋಹಾರ್​ ಅವರನ್ನು ತುಂಬಾ ಓಲೈಸುವುದಕ್ಕೆ ಹೋಗಬೇಡಿ. ನಿರೂಪಕರಿಗೆ ಯಾವುದೇ ಪ್ರಶ್ನೆಯನ್ನು ಕಿತ್ತು ಹಾಕುವ ಅಧಿಕಾರ ಇರುವುದಿಲ್ಲ. ಯಾವುದು ಬೇಕು, ಯಾವುದು ಬೇಡ ಎಂದು ತೀರ್ಮಾನಿಸುವುದು ಚಾನಲ್​ ಹೊರತು, ಅವರಲ್ಲ. ಇನ್ನು, ಕಂಗನಾಗೆ ಆ ಕಾರ್ಯಕ್ರಮಕ್ಕೆ ಆಹ್ವಾನ ಬಂದಾಗ, ಅವರು ಅಷ್ಟು ಸುಲಭವಾಗಿ ಒಪ್ಪಿರಲಿಲ್ಲ. ಕೊನೆಗೆ ಸಾಕಷ್ಟು ಒತ್ತಾಯದ ನಂತರ ಅವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ, ಅವರು ಸೂಪರ್​ಸ್ಟಾರ್​ ಆಗಿದ್ದರು. ಆದರೆ, ಕರಣ್​ ಒಬ್ಬ ಸಾಮಾನ್ಯ ನಿರೂಪಕರಾಗಿದ್ದರು. ಒಂದು ಪಕ್ಷ ಕಂಗನಾ ಹೇಳಿದ್ದು ಡಿಲೀಟ್​ ಆಗಿದ್ದರೂ, ಕಂಗನಾಗೆ ತನ್ನ ಅಭಿಪ್ರಾಯವನ್ನು ಹೇಳುವುದಕ್ಕೆ ಅದೇ ವೇದಿಕೆ ಬೇಕಾಗಿರಲಿಲ್ಲ. ಕರಣ್​ ಜೋಹಾರ್​ ಕಾರ್ಯಕ್ರಮವಲ್ಲದೆ, ಬೇರೆ ವೇದಿಕೆಗಳಲ್ಲೂ ತಮ್ಮ ಅಭಿಪ್ರಾಯ ಮಂಡಿಸುವ ಧೈರ್ಯ ಕಂಗನಾಗೆ ಇದೆ' ಎನ್ನುವರ್ಥದಲ್ಲಿ ಬರದುಕೊಂಡಿದೆ.

ಈ ವಿಷಯವಾಗಿ ಸ್ವರಾ ಏನು ಹೇಳುತ್ತಾರೋ ಮತ್ತು ಈ ಪ್ರಕರಣ ಇನ್ನೂ ಯಾವ್ಯಾವ ರೂಪ ಪಡೆಯುತ್ತದೋ ಗೊತ್ತಿಲ್ಲ.