ಮುಂಬೈ: ಬಾಲಿವುಡ್ ಚಿತ್ರರಂಗದಲ್ಲಿ ಯಾವ ಸ್ಟಾರ್ ನಟರ ಚಿತ್ರಗಳು ತೆರೆಕಾಣಲಿದೆ, ಯಾವೆಲ್ಲಾ ಚಿತ್ರಗಳು ಸೆಟ್ಟೇರಿದೆ ಎಂಬ ಪ್ರಶ್ನೆಗಳ ನಡುವೆ ಇದೀಗ ನಟಿ ಕಂಗನಾ ರಣಾವತ್(Kangana Ranaut) ಅವರು ನೀಡಿದ ಹೇಳಿಕೆಯೊಂದು(Controversial) ಭಾರಿ ಟೀಕೆಗೆ ಕಾರಣವಾಗಿದೆ.
ಬಾಲಿವುಡ್(Bollywood) ಚಿತ್ರರಂಗದಲ್ಲಿ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶಿಸಲು ಸಜ್ಜಾಗಿರುವ ರಾಮಾಯಣ ಚಿತ್ರಕ್ಕೆ ನಿಜ ಜೀವನದಲ್ಲಿ ದಂಪತಿಗಳಾಗಿರುವ ನಟ ರಣಬೀರ್ ಕಪೂರ್(Ranbir Kapoor) ಮತ್ತು ನಟಿ ಆಲಿಯಾ ಭಟ್(Alia Bhatt), ರಾಮ ಮತ್ತು ಸೀತಾ ಪಾತ್ರಗಳಲ್ಲಿ ನಟಿಸಲು ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ರಾಮಾಯಣ(Ramayana) ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಸೇರಿದಂತೆ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ನಟ ಯಶ್(Yash) ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ವದಂತಿಗಳು ಕೂಡ ಹೆಚ್ಚು ಹರಿದಾಡುತ್ತಿದೆ. ಈ ಎಲ್ಲಾ ಸುದ್ದಿಗಳ ಬೆನ್ನಲ್ಲೇ ಇದೀಗ ನಟಿ ಕಂಗನಾ ರಣಾವತ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೊರಟ ಬಸ್ನಲ್ಲಿ ಉಚಿತ ಟಿಕೆಟ್ ವಿತರಿಸಿದ ಸಿಎಂ: ರಾಜ್ಯಾದ್ಯಂತ ಫ್ರೀ ಬಸ್ ಪ್ರಯಾಣ ಆರಂಭ
ತಮ್ಮ ಇನ್ಸ್ಟಾಗ್ರಾಮ್(Instagram) ಖಾತೆಯಲ್ಲಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ನಟಿ ಕಂಗನಾ, "ಬಾಲಿವುಡ್ ಅಂಗಳದಲ್ಲಿ ಕಳೆದ ಕೆಲ ದಿನಗಳಿಂದ ರಾಮಾಯಣ ಚಿತ್ರದ ಕುರಿತು ನಾನಾ ಸುದ್ದಿಗಳನ್ನು ಕೇಳಿದ್ದೇನೆ. ಆ ನಟ ಒಬ್ಬ ಮದ್ಯವ್ಯಸನಿ, ಹೆಣ್ಣುಬಾಕ, ಬಿಳಿ ಇಲಿ. ಈ ಹಿಂದೆಯಷ್ಟೇ ಶಿವನ ಪಾತ್ರದಲ್ಲಿ ನಟಿಸಿ, ತನ್ನನ್ನು ತಾನು ಶಿವನ ರೀತಿ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡಿದ್ದ. ಅಂತಹ ನಟ ಇದೀಗ ರಾಮನ ಪಾತ್ರ ಮಾಡಲು ಮುಂದಾಗಿದ್ದಾನೆ?" ಎಂದು ಪರೋಕ್ಷವಾಗಿ ನಟ ರಣಬೀರ್ ಕಪೂರ್ ಅವರನ್ನು ಟೀಕಿಸಿದ್ದಾರೆ.
ನಟಿ ಕಂಗನಾ ಅವರ ಹೇಳಿಕೆಯನ್ನು ಗಮನಿಸಿದ ನೆಟ್ಟಿಗರು ವ್ಯಾಪಕವಾಗಿ ಕಮೆಂಟ್ ಮಾಡಿದ್ದಾರೆ. "ಇಂಥ ಪದಗಳನ್ನು ಎಲ್ಲಿಂದ ಹುಡುಕಿ ತರುತ್ತಾರೆ ಈ ನಟಿ?" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಇವರು ಮಾಡುವ ಟೀಕೆಗಳೆಲ್ಲವೂ ಬಹಳ ಕ್ರಿಯೇಟಿವ್ ಆಗಿರುತ್ತದೆ" ಎಂದು ಹೇಳಿದ್ದಾರೆ. ಒಟ್ಟಾರೆ ನಟಿ ಕಂಗನಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.