ನಟಿ, ಸಂಸದೆ ಕಂಗನಾ ರಣಾವತ್ ನಟಿಸಿ, ನಿರ್ದೇಶಿಸಿರುವ ಸಿನಿಮಾ "ಎಮರ್ಜೆನ್ಸಿ'. ಈ ಚಿತ್ರದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದು, ಶೀರ್ಷಿಕೆಯೇ ಹೇಳುವಂತೆ 1975ರಿಂದ 1977ರವರೆಗೆ ಭಾರತದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ಸುತ್ತ ಕಥೆ ಹೆಣೆಯಲಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದೇ 6ರಂದು ಸಿನಿಮಾ ರಿಲೀಸ್ ಎಂದು ಘೋಷಿಸಲಾಗಿತ್ತು.
ಆದರೆ, ಇದೀಗ ಕೆಲ ಸಿಖ್ ಸಂಟನೆಗಳು, ಚಿತ್ರದಲ್ಲಿ ಸಿಖ್ಖರನ್ನು ಅವಹೇಳನಕಾರಿಯಾಗಿ ತೋರಿಸಲಾಗಿದ್ದು, ಸಿನಿಮಾ ಬ್ಯಾನ್ ಮಾಡುವಂತೆ ಒತ್ತಡ ಹೇರಿವೆ. ಸಿಬಿಎಫ್ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್) ಚಿತ್ರದಲ್ಲಿ ಕೆಲ ಕಟ್ಗಳನ್ನು ಸೂಚಿಸಿದ್ದು, ಅದಕ್ಕೆ ಕಂಗನಾ ಒಪ್ಪಿಲ್ಲ. ಹೀಗಾಗಿ "ಎಮರ್ಜೆನ್ಸಿ' ರಿಲೀಸ್ ಮತ್ತಷ್ಟು ತಡವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಬಗ್ಗೆ ಕಂಗನಾ, "ಇಂದಿರಾ ಗಾಂಧಿಯವರ ಹತ್ಯೆ, ಸಿಖ್ಖರ ವಿರುದ್ಧದ ದಂಗೆ ಮತ್ತು ಜರ್ನೈಲ್ ಸಿಂಗ್ ಬಿಂದ್ರನ್ವಾಲೆ ಬಗ್ಗೆ ಸಿನಿಮಾದಲ್ಲಿ ತೋರಿಸಬಾರದು ಎಂದು ಒತ್ತಡ ಹೇರಲಾಗುತ್ತಿದೆ. ಆದರೆ, ಸಿನಿಮಾದಲ್ಲಿ ಇನ್ನೇನು ಇರಬೇಕೋ ನನಗಂತೂ ಅರ್ಥವಾಗುತ್ತಿಲ್ಲ. ಇನ್ನೆಷ್ಟು ದಿನ ಭಯದಲ್ಲಿ ಬದುಕಬೇಕು? ಸೆನ್ಸಾರ್ ಮಂಡಳಿ ವಿನಾಕಾರಣ ಚಿತ್ರದ ಪ್ರಮಾಣಪತ್ರ ನೀಡದೇ ತಡ ಮಾಡುತ್ತಿದೆ. ಅದೇನೇ ಆದರೂ ನಾನು ಯಾವ ದೃಶ್ಯವನ್ನೂ ಕಟ್ ಮಾಡದೇ ಸಿನಿಮಾ ರಿಲೀಸ್ ಮಾಡುತ್ತೇನೆ. ಅದಕ್ಕೆ ಬೇಕಾದರೆ ಕೋರ್ಟ್ ಮೆಟ್ಟಿಲು ಹತ್ತಲೂ ನಾನು ಸಿದ್ಧ' ಎಂದಿದ್ದಾರೆ.
ಅಂದಹಾಗೆ, ಎಲ್ಲವೂ ಅಂದುಕೊಂಡಂತಾದರೆ "ಎಮರ್ಜೆನ್ಸಿ' ಕಳೆದ ವರ್ಷ ನವೆಂಬರ್ನಲ್ಲೇ ರಿಲೀಸ್ ಆಗಬೇಕಿತ್ತು. ನಂತರ ಈ ಜೂನ್ಗೆ ಮುಂದೂಡಲಾಗಿತ್ತು, ಬಳಿಕ ಇದೇ ತಿಂಗಳ 6ಕ್ಕೆ ಬಿಡುಗಡೆ ಎಂದು ಘೋಷಿಸಲಾಗಿತ್ತು. -ಏಜೆನ್ಸೀಸ್