ಸಿನಿವಾಣಿ

ಏಪ್ರಿಲ್​ನಲ್ಲಿ ಕಂಗನಾ ಧಾಕಡ್

ಬಾಲಿವುಡ್​ನಲ್ಲಿ ಸದ್ಯ ಸಿನಿಮಾ ಬಿಡುಗಡೆಗೆ ದೊಡ್ಡ ಟ್ರಾಫಿಕ್ ಏರ್ಪಟ್ಟಿದೆ. ಈಗಾಗಲೇ ಸಾಕಷ್ಟು ಚಿತ್ರ ನಿರ್ವಪಕರು ಸಿಕ್ಕಿದ್ದೇ ಚಾನ್ಸ್ ಎಂದು ತಮ್ಮ ಚಿತ್ರಗಳ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಇತ್ತ ದಕ್ಷಿಣದಲ್ಲೂ ಇದು ಮುಂದುವರಿದಿದ್ದು, ಸಾಕಷ್ಟು ದೊಡ್ಡ ಬಜೆಟ್​ನ ಮತ್ತು ಸ್ಟಾರ್ ಸಿನಿಮಾಗಳು ಒಂದಾದ ನಂತರ ಒಂದು ಸರಣಿಯಲ್ಲಿ ತೆರೆಗೆ ಬರಲು ಸಿದ್ಧವಾಗಿವೆ.

ಈ ನಡುವೆ ಇದೇ ವರ್ಷಾಂತ್ಯಕ್ಕೆ ಬರಬೇಕಿದ್ದ ಕಂಗನಾ ನಟನೆಯ ‘ಧಾಕಡ್’ ಚಿತ್ರ ಕಾರಣಾಂತರಗಳಿಂದ 2022ರ ಏಪ್ರಿಲ್ 8ಕ್ಕೆ ಮುಂದೂಡಲ್ಪಟ್ಟಿದೆ. ಇತ್ತೀಚೆಗಷ್ಟೇ, ಕಂಗನಾ ಅಭಿನಯದ ‘ತಲೈವಿ’ ಬಿಡುಗಡೆಯಾಗಿತ್ತು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನವನ್ನಾಧರಿಸಿದ ಈ ಸಿನಿಮಾ, ಬಾಕ್ಸ್ ಆಫೀಸ್​ನಲ್ಲಿ ಹೇಳಿಕೊಳ್ಳುವಂಥ ಕಮಾಯಿ ಮಾಡಲಿಲ್ಲ. ವಿಮರ್ಶೆ ದೃಷ್ಟಿಯಿಂದಲೂ ಸಿನಿಮಾ ಹಿಂದೆಬಿದ್ದಿತ್ತು. ಆ ಒಂದು ಕಾರಣಕ್ಕೆ ‘ಧಾಕಡ್’ ಚಿತ್ರ ಮುಂದೂಡಲಾಗಿದೆಯಂತೆ. ರಜನೀಶ್ ಘಾಯ್ ನಿರ್ದೇಶನ ಮಾಡಿದ್ದಾರೆ. -ಏಜೆನ್ಸೀಸ್