ಸಿನಿವಾಣಿ

ಶಿವಸೇನಾ ಈಗ ಸೋನಿಯಾ ಸೇನಾ ಆಗಿದೆ ... ಕಂಗನಾ ಆರೋಪ

ಮುಂಬೈ: ತಮ್ಮ ಕಚೇರಿಯನ್ನು ಕ್ಷುಲ್ಲಕ ಕಾರಣಕ್ಕೆ ಒಡೆಯಲಾಗಿದೆ ಎಂದು ಬಾಲಿವುಡ್​ ನಟಿ ಕಂಗನಾ ರಣಾವತ್​, ಬುಧವಾರವಷ್ಟೇ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಮಹಾರಾಷ್ಟ್ರ ಸರ್ಕಾರವನ್ನು ಈ ಕುರಿತು ಟೀಕಿಸಿದ್ದರು. ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಅವರು, ಅದೊಂದು ಬೆರೆಕೆ ಸರ್ಕಾರ ಎಂದಿದ್ದಾರೆ. ಅಷ್ಟೇ ಅಲ್ಲ, ಅಧಿಕಾರದ ಚುಕ್ಕಾಣಿ ಹಿಡಿದಿರುವ ಶಿವಸೇನಾವನ್ನು ಸೋನಿಯಾ ಸೇನಾ ಎಂದು ಕರೆದಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನಾ ಜತೆಗೆ ಸೇರಿ ಸರ್ಕಾರ ರಚಿಸಬೇಕಿತ್ತು. ಆದರೆ, ಶಿವಸೇನಾದವರು ಇಂಥ ಕ್ಷುಲ್ಲಕ ಕೆಲಸಗಳನ್ನು ಮಾಡುವುದರಿಂದಲೇ, ಅವರ ಸಹವಾಸವೇ ಬೇಡ ಎಂದು ದೇವೇಂದ್ರ ಫಡ್ನವಿಸ್​ ಹೇಳಿರಬೇಕು. ಶಿವಸೇನಾದವರು ಚುನಾವಣೆಯಲ್ಲಿ ಸೋತ ನಂತರ ನಾಚಿಕೆ ಇಲ್ಲದೆ ಕಾಂಗ್ರೆಸ್​ನವರ ಜತೆಗೆ ಸೇರಿ ಸರ್ಕಾರ ರಚಿಸಿ, ಸೋನಿಯಾ ಸೇನಾ ಆಗಿ ಬದಲಾಗಿದ್ದಾರೆ' ಎಂದು ಆರೋಪಿಸಿದ್ದಾರೆ.

ಇದಕ್ಕೂ ಮುನ್ನ ಮುಂಬೈ ನಗರದಲ್ಲೆ ಭದ್ರತೆ ಇಲ್ಲ ಎಂದು ಕಂಗನಾ ಹೇಳಿದ್ದರು. ಈ ವಿಷಯವಾಗಿ ಸಿಟ್ಟಾಗಿದ್ದ ಶಿವಸೇನೆ ಮುಖಂಡ ಸಂಜಯ್​ ರಾವತ್​, ಅಷ್ಟೊಂದು ಭಯವಿದ್ದರೆ ಮುಂಬೈಗೆ ಬರಬೇಡಿ ಎಂದಿದ್ದರು. ಇದಕ್ಕೆ ಸಿಟ್ಟಾದ ಕಂಗನಾ, ತಮಗೆ ಮುಂಬೈಗೆ ಬರದಂತೆ ಬೆದರಿಕೆ ಹಾಕಲಾಗುತ್ತಿದೆ ಮತ್ತು ಈ ನಗರ ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವಾಗುತ್ತಿದೆ ಎಂದು ಆರೋಪಿದ್ದರು. ಇದಕ್ಕೆ ಪ್ರತಿಯಾಗಿ, ಕಂಗನಾ ಅವರು ತಮ್ಮ ಕಚೇರಿಯನ್ನು ಅತಿಕ್ರಮವಾಗಿ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಬೃಹನ್​ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು, ಇಂದು ಅನಧಿಕೃತವಾಗಿ ಕಟ್ಟಿದ್ದ ಭಾಗಗಳನ್ನು ಒಡೆದು ಹಾಕಿದ್ದರು.

ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಕಂಗನಾ ಒಂದು ಸವಾಲು ಹಾಕಿದ್ದರು. ಈ ಕುರಿತು ವಿಡಿಯೋ ಮಾಡಿದ್ದ ಅವರು, 'ಸಿನಿಮಾ ಮಾಫಿಯಾ ಜತೆಗೆ ಸೇರಿಕೊಂಡು ನನ್ನ ಮೇಲೆ ಸೇಡು ತೀರಿಸಿಕಂಡೆ ಎಂದು ನಿಮಗೆ ಖುಷಿಯಾಗಿರಬಹುದು. ಇವತ್ತು ನನ್ನ ಮನೆ ಮುರಿದಿದೆ. ನಾಳೆ ನಿನ್ನ ಅಹಂಕಾರ ಮುರಿಯತ್ತೆ, ಸಮಯ ಖಂಡಿತಾ ಒಂದೇ ತರಹ ಇರುವುದಿಲ್ಲ' ಎಂದು ಕಂಗನಾ ಹೇಳಿದ್ದರು.