ಮುಂಬೈ: ತಮ್ಮ ಕಚೇರಿಯನ್ನು ಕ್ಷುಲ್ಲಕ ಕಾರಣಕ್ಕೆ ಒಡೆದಿದ್ದಕ್ಕೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದ ನಟಿ ಕಂಗನಾ ರಣಾವತ್, ಇಂಥದ್ದೊಂದು ಕ್ರಮ ಸರಿಯಾ ಮತ್ತು ಮಹಿಳೆಯಾಗಿ ನಿಮಗೆ ಈ ಬಗ್ಗೆ ಏನೂ ಅನಿಸುವುದಿಲ್ಲವಾ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪ್ರಭಾಸ್ಗೆ ಮುಜುಗರ ತಂದ ಸಂಜನಾ ಅರೆಸ್ಟ್!
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ತತ್ವಗಳನ್ನು ನಿಮ್ಮ ಸರ್ಕಾರ ಗಾಳಿಗೆ ತೂರುತ್ತಿದೆ. ಆ ತತ್ವಗಳನ್ನು ಎತ್ತಿಹಿಡಿಯುವುದಕ್ಕೆ ನಿಮ್ಮ ಸರ್ಕಾರಕ್ಕೆ ಹೇಳಿ' ಎಂದು ಕಂಗನಾ ಹೇಳಿದ್ದಾರೆ.
'ಒಬ್ಬ ಮಹಿಳೆಯಾಗಿ ಇನ್ನೊಬ್ಬ ಮಹಿಳೆಯ ಕಷ್ಟ ಮತ್ತು ಹೋರಾಟಗಳ ಬಗ್ಗೆ ನಿಮಗೆ ಅರಿವಿರಬಹುದು ಎಂದುಕೊಳ್ಳುತ್ತೇನೆ. ಒಬ್ಬ ಮಹಿಳೆಯಾಗಿ ಇನ್ನೊಬ್ಬ ಮಹಿಳೆಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನಿಮಗೆ ಸಿಟ್ಟು ಬರುತ್ತಿಲ್ಲವಾ? ಅದರಲ್ಲೂ ನಿಮ್ಮ ಸರ್ಕಾರವೇ ಇಷ್ಟೆಲ್ಲಾ ಮಾಡುತ್ತಿರುವಾಗ ನೀವು ಮೌನವಾಗಿರುವುದು ಸರಿಯಲ್ಲ. ಈಗಲಾದರೂ ನೀವು ಮಧ್ಯೆ ಪ್ರವೇಶಿಸುತ್ತೀರಾ ಎಂಬ ನಂಬಿಕೆ ಇದೆ' ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಮುಂಬೈ ನಗರದಲ್ಲೆ ಭದ್ರತೆ ಇಲ್ಲ ಎಂದು ಕಂಗನಾ ಹೇಳಿದ್ದರು. ಈ ವಿಷಯವಾಗಿ ಸಿಟ್ಟಾಗಿದ್ದ ಶಿವಸೇನೆ ಮುಖಂಡ ಸಂಜಯ್ ರಾವತ್, ಅಷ್ಟೊಂದು ಭಯವಿದ್ದರೆ ಮುಂಬೈಗೆ ಬರಬೇಡಿ ಎಂದಿದ್ದರು. ಇದಕ್ಕೆ ಸಿಟ್ಟಾದ ಕಂಗನಾ, ತಮಗೆ ಮುಂಬೈಗೆ ಬರದಂತೆ ಬೆದರಿಕೆ ಹಾಕಲಾಗುತ್ತಿದೆ ಮತ್ತು ಈ ನಗರ ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವಾಗುತ್ತಿದೆ ಎಂದು ಆರೋಪಿದ್ದರು. ಇದಕ್ಕೆ ಪ್ರತಿಯಾಗಿ, ಕಂಗನಾ ಅವರು ತಮ್ಮ ಕಚೇರಿಯನ್ನು ಅತಿಕ್ರಮವಾಗಿ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು, ಬುಧವಾರ ಅನಧಿಕೃತವಾಗಿ ಕಟ್ಟಿದ್ದ ಭಾಗಗಳನ್ನು ಒಡೆದು ಹಾಕಿದ್ದರು.
ಈ ಕುರಿತು ಟ್ವೀಟ್ ಮಾಡಿದ್ದ ಅವರಯ, 'ಶಿವಸೇನಾದವರು ಚುನಾವಣೆಯಲ್ಲಿ ಸೋತ ನಂತರ ನಾಚಿಕೆ ಇಲ್ಲದೆ ಕಾಂಗ್ರೆಸ್ನವರ ಜತೆಗೆ ಸೇರಿ ಸರ್ಕಾರ ರಚಿಸಿ, ಸೋನಿಯಾ ಸೇನಾ ಆಗಿ ಬದಲಾಗಿದ್ದಾರೆ' ಎಂದು ಆರೋಪಿಸಿದ್ದರು.