ಸಿನಿವಾಣಿ

INDIAN 2 Movie Review : ಮೊದರ್ಲಧ ನಿಧಾನ, ದ್ವೀತಿಯಾರ್ಧವೇ ಪ್ರಧಾನ

ಚಿತ್ರ: ಇಂಡಿಯನ್​ 2
ನಿರ್ದೇಶನ: ಶಂಕರ್​
ನಿರ್ಮಾಣ : ಲೈಕಾ ಪ್ರೊಡಕ್ಷನ್ಸ್​
ತಾರಾಗಣ: ಕಮಲ್​ ಹಾಸನ್​, ಸಿದ್ಧಾರ್ಥ್​, ರಕುಲ್​ ಪ್ರೀತ್​ ಸಿಂಗ್​, ಪ್ರಿಯಾ ಭವಾನಿ ಶಂಕರ್​, ಬಾಬಿ ಸಿಂಹ, ಸಮುತಿರಕಣಿ ಮುಂತಾದವರು.

| ಹರ್ಷವರ್ಧನ್​ ಬ್ಯಾಡನೂರು

ಮದ್ಯಪಾನ ಮತ್ತು ಧೂಮಪಾನಗಳ ಬಗೆಗಿನ ಸೂಚನೆಗಳ ಜತೆಗೆ "ಭ್ರಷ್ಟಾಚಾರದಿಂದ ದೇಶಕ್ಕೆ ಕ್ಯಾನ್ಸರ್​ ಉಂಟಾಗುತ್ತದೆ. ಭ್ರಷ್ಟಾಚಾರ ಕೊಲ್ಲುತ್ತದೆ' ಎಂಬ ವಿಶೇಷ ಸೂಚನೆಯೊಂದಿಗೆ "ಇಂಡಿಯನ್​ 2' ಪ್ರಾರಂಭವಾಗುತ್ತದೆ. ಅಲ್ಲಿಗೆ ಭ್ರಷ್ಟರ ವಿರುದ್ಧ ಸೇನಾಪತಿ ಸಮರ ಇಲ್ಲೂ ಮುಂದುವರಿಯಲಿದೆ ಎಂಬ ಅಂಶ ಗೊತ್ತಾಗುತ್ತದೆ.

ಶಂಕರ್​ ನಿರ್ದೇಶನದಲ್ಲಿ, ಕಮಲ್​ ಹಾಸನ್​ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ 1996ರ ಸಿನಿಮಾ "ಇಂಡಿಯನ್​' ಸೂಪರ್​ಹಿಟ್​ ಎನಿಸಿಕೊಂಡಿತ್ತು. ಇದೀಗ 28 ವರ್ಷಗಳ ನಂತರ ಅದರ ಮುಂದುವರಿದ ಕಥೆ ಬಂದಿದೆ. ಮೊದಲ ಭಾಗದಲ್ಲಿ ಸೇನಾಪತಿಯ ವಯಸ್ಸು 70ರ ಆಸುಪಾಸು ಎನ್ನಲಾಗಿತ್ತು. 60ಕ್ಕೆ ಅರಳು&ಮರಳು ಎನ್ನುವಾಗ, 28 ವರ್ಷಗಳ ಬಳಿಕ ವಾಪಸ್ಸಾಗುವ 100 ವರ್ಷದ "ಇಂಡಿಯನ್​ ತಾತಾ'ನಿಂದ ಶಂಕರ್​ ಎಲ್ಲ ರೀತಿಯ ಆ್ಯಕ್ಷನ್​ ಮಾಡಿಸಿದ್ದಾರೆ. ಬಾಡಿ ಬಿಲ್ಡರ್​ಗಳ ಮಧ್ಯೆ ಈ ಸೆಂಚುರಿ ಸೇನಾಪತಿ ಸಿಕ್ಸ್​ ಪ್ಯಾಕ್​ ಪ್ರದರ್ಶಿಸಿದ್ದೂ ಇದೆ. ಆತನಿಗೆ ಹಲವಾರು ಜನರನ್ನು ಬಡಿಯುವಷ್ಟು ಶಕ್ತಿಯಿದೆ, "ವರ್ಮ ಕಲೆ'ಯಿಂದ ಕೇವಲ ಎರಡೇ ಬೆರಳುಗಳಲ್ಲಿ ದುಷ್ಟರನ್ನು ಪ್ರತಿಮೆಗಳಂತೆ ನಿಲ್ಲಿಸುವಷ್ಟು ತಾಕತ್ತಿದೆ, ನೂರಾರು ಜನರಿಂದ ತಪ್ಪಿಸಿಕೊಂಡು 60 ಕಿಲೋಮೀಟರ್​ ವೇಗದಲ್ಲಿ ಯೂನಿಸೈಕಲ್​ ಓಡಿಸುವ ಚಾಕಚಕ್ಯತೆಯಿದೆ. ಹೀಗಾಗಿಯೇ ನಿರ್ದೇಶಕ ಶಂಕರ್​ ಚಿತ್ರವನ್ನು ಇಂದಿನ ಪೀಳಿಗೆಗೆ ಹತ್ತಿರವಾಗಿಸಲು ಏನೇ ಸರ್ಕಸ್​ ಮಾಡಿದರೂ, "ಇಂಡಿಯನ್​ 2' ನೈಜತೆಗೆ ಸ್ವಲ್ಪ ದೂರವೇ ಉಳಿದಿದೆ. ಮೊದಲ ಭಾಗದಲ್ಲಿ ತಮಿಳುನಾಡಿನಲ್ಲೇ ಕಥೆ ನಡೆದರೆ, ಈ ಸೀಕ್ವೆಲ್​ನಲ್ಲಿ ಸೇನಾಪತಿ ತೈಪೆಯಿಂದ ಜರ್ನಿ ಪ್ರಾರಂಭಿಸಿ ಜಮ್ಮು ಕಾಶ್ಮೀರ, ಪಂಜಾಬ್​, ಗುಜರಾತ್​, ಒಡಿಶಾ ಅಂತ ಪ್ಯಾನ್​ ಇಂಡಿಯಾ ಓಡಾಡಿದ್ದಾರೆ.

ಚಿತ್ರ ಅರವಿಂದನ್​ (ಸಿದ್ಧಾರ್ಥ್​), ಆರತಿ (ಪ್ರಿಯಾ) ಸೇರಿ ನಾಲ್ವರು ಗೆಳೆಯರು "ಬಾರ್ಕಿಂಗ್​ ಡಾಗ್ಸ್​' ಎಂಬ ಯೂಟ್ಯೂಬ್​ ಚಾನಲ್​ ಮೂಲಕ ದುಷ್ಟರು ಮತ್ತು ಭ್ರಷ್ಟರ ವಿರುದ್ಧ ಹೋರಾಕ್ಕಿಳಿದಿರುತ್ತಾರೆ. ಭಾರತದಲ್ಲಿ ಭ್ರಷ್ಟಾಚಾರವನ್ನು ಬುಡಸಮೇತವಾಗಿ ಕೀಳಲು "ಇಂಡಿಯನ್​ ತಾತಾ' ಸೇನಾಪತಿ ವಾಪಸ್​ ಬರಲೇಬೇಕು ಅಂತ ಅವರಿಗೆ ಅನ್ನಿಸುತ್ತದೆ. ಹೀಗಾಗಿ ಜಾಲತಾಣದಲ್ಲಿ ಕಮ್​ಬ್ಯಾಕ್​ ಇಂಡಿಯನ್​ ಎಂಬ ಹ್ಯಾಶ್​ಟ್ಯಾಗ್​ ಟ್ರೆಂಡ್​ ಮಾಡಿಸುತ್ತಾರೆ. ಅವರ ಆಸೆಯಂತೆ ಇಂಡಿಯನ್​ ತಾತಾ ವಾಪಸ್​ ಬರುತ್ತಾನೆ. ಭ್ರಷ್ಟರ ವಿರುದ್ಧ ಸಮರ ಸಾರುತ್ತಾನೆ. ಆದರೆ, ಕಥೆ ಸಾಗಿದಂತೆ ಸೇನಾಪತಿಯನ್ನು ಕರೆಸಿಕೊಂಡ ಇವರು ಸೇರಿ ದೇಶಾದ್ಯಂತ ಜನ ಆತನ ವಿರುದ್ಧ ತಿರುಗಿ ಬೀಳುತ್ತಾರೆ. ಗೋ ಬ್ಯಾಕ್​ ಅಂತ ಟ್ರೆಂಡ್​ ಶುರು ಮಾಡುತ್ತಾರೆ. ಅದಕ್ಕೆ ಕಾರಣವೇನು? ಸೇನಾಪತಿ ಏನು ಮಾಡುತ್ತಾನೆ? ಮುಂದೇನಾಗುತ್ತೆ? ಎಂಬುದೇ "ಇಂಡಿಯನ್​ 2'. 180 ನಿಮಿಷಗಳ "ಇಂಡಿಯನ್​ 2' ಮೊದರ್ಲಧ ನಿಧಾನವೆನಿಸಿದರೂ, ದ್ವೀತಿಯಾರ್ಧ ಅನಿರೀತ ಟ್ವಿಸ್ಟ್​ಗಳಿಂದ ವೇಗ ಪಡೆದಿದೆ. ಕ್ಲೆಮ್ಯಾಕ್ಸ್​ನಲ್ಲಿ "ಇಂಡಿಯನ್​ 3 & ವಾರ್​ ಮೋಡ್​'ಗೆ ಲಿಂಕ್​ ನೀಡಲಾಗಿದೆ. ತೆರೆಯ ಮೇಲೆ ಹಬ್ಬದಂತೆ ಕಾಣುವ ಚಿತ್ರ, ಥಿಯೇಟರ್​ನಿಂದ ಹೊರಬರುವಾಗ ಕಾಡುವುದಿಲ್ಲ. ಆದರೆ "ಇಂಡಿಯನ್​ 2' ಒಂದೊಳ್ಳೆ ಥಿಯೇಟರ್​ ಅನುಭವ ನೀಡುವ ಸಿನಿಮಾ.