ಚೆನ್ನೈ: ಒಬ್ಬ ಸಾಮಾನ್ಯ ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಅದೆಷ್ಟು ಲಂಚ ಕೊಡಬೇಕು ಗೊತ್ತಾ? ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳುವುದಕ್ಕೆ, ಯಾವ್ಯಾವುದಕ್ಕೆ, ಎಷ್ಟೆಷ್ಟು ಕೊಡಬೇಕಾಗುತ್ತದೆ ಎಂಬ ಅಂದಾಜಿದೆಯಾ?
ಇದನ್ನೂ ಓದಿ: ತಮಿಳಿಗೆ ಧ್ರುವ ಸರ್ಜಾ ಅಭಿನಯದ ಪೊಗರು
ಗೊತ್ತಿಲ್ಲದಿದ್ದರೆ, ಇಲ್ಲಿ ಕೇಳಿ. ಮಕ್ಕಳ್ ನಿಧಿ ಮಯ್ಯಮ್ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿ, ಮುಂದಿನ ವರ್ಷದ ತಮಿಳುನಾಡು ಚುನಾವಣೆಗೆ ಸ್ಪರ್ಧಿಸುವುದಕ್ಕೆ ಮುಂದಾಗಿರುವ ಹಿರಿಯ ನಟ-ನಿರ್ದೇಶಕ ಕಮಲ್ ಹಾಸನ್ ಅವರು ಇದೀಗ ಲಂಚದ ಪಟ್ಟಿಯನ್ನೇ ಬಿಡುಗಡೆ ಮಾಡಿದ್ದಾರೆ. ತಮಿಳು ನಾಡಿನಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಎಷ್ಟೆಷ್ಟು ಲಂಚ ಕೊಡಬೇಕಾಗುತ್ತದೆ ಎಂಬುದನ್ನು ಇದರಲ್ಲಿ ವಿವರಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಹುಟ್ಟಿದರೆ 500 ರೂ, ಜನನ ಪ್ರಮಾಣ ಪತ್ರಕ್ಕೆ 200ರಿಂದ 500 ರೂ, ಜಾತಿ ಪ್ರಮಾಣ ಪತ್ರ - 500ರಿಂದ 3 ಸಾವಿರ ರೂ, ಆರ್ಟಿಓ ಲೈಸನ್ಸ್ 1000ದಿಂದ 5000 ರೂ, ರೇಷನ್ ಕಾರ್ಡ್ 1000 ರೂ, ಆಸ್ತಿ ತೆರಿಗೆ 5000 ರೂ, ಡ್ರೈನೇಜ್ ಕನೆಕ್ಷನ್ 5000 ರೂ, ವಿಧವಾ ಪಂಚಣಿ 500 ರೂ, ಮರಣ ಪ್ರಮಾಣಪತ್ರ 500 ರೂ ... ಹೀಗೆ ಸರ್ಕಾರಿ ಕಚೇರಿಗಳಲ್ಲಿ ಯಾವ್ಯಾವ ಕೆಲಸ ಮಾಡಿಕೊಡುವುದಕ್ಕೆ ಎಷ್ಟು ಕೇಳಲಾಗುತ್ತದೆ ಮತ್ತು ಒಬ್ಬ ಸಾಮಾನ್ಯ ಮನುಷ್ಯ ಎಷ್ಟು ಕೊಡಬೇಕಾಗುತ್ತಿದೆ ಎಂಬುದನ್ನು ಅವರು ಈ ಪಟ್ಟಿಯ ಮುಖೇನ ವಿವರಿಸಿದ್ದಾರೆ.
ಇದನ್ನೂ ಓದಿ: ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ವಿವಾಹ
ಈ ವಿಷಯ ಇದೀಗ ಸಾಕಷ್ಟು ಚರ್ಚೆಯಾಗುತ್ತಿದ್ದು, ಆಡಳಿತ ಪಕ್ಷವನ್ನು ಸಿಕ್ಕಿಸಲಿಕ್ಕೆಂದೇ ಕಮಲ್ ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ಸರ್ಕಾರದ ವತಿಯಿಂದ ಯಾರೊಬ್ಬರೂ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಯಾರು, ಏನು ಪ್ರತಿಕ್ರಿಯೆ ನೀಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.