ಸಿನಿವಾಣಿ

ಅನಾರೋಗ್ಯದಿಂದಾಗಿ ನಟ ಕಮಲ್​ ಹಾಸನ್​ ಆಸ್ಪತ್ರೆಗೆ ದಾಖಲು: 2 ದಿನ ಸಂಪೂರ್ಣ ವಿಶ್ರಾಂತಿಗೆ ವೈದ್ಯರ ಸೂಚನೆ

ಚೆನ್ನೈ: ಸಕಲಕಲಾ ವಲ್ಲಭ ಕಮಲ್​ ಹಾಸನ್ ಅವರು ಅನಾರೋಗ್ಯದಿಂದಾಗಿ ನವೆಂಬರ್​ 23 ರಂದು ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್​ ಸೆಂಟರ್​ (ಎಸ್​ಆರ್​ಎಂಸಿ)ಗೆ ದಾಖಲಾಗಿ, ಇಂದು ಬಿಡುಗಡೆಯಾಗಿದ್ದಾರೆಂದು ವರದಿಯಾಗಿದೆ. ​

ಸದ್ಯದ ವರದಿಗಳ ಪ್ರಕಾರ ನಿಯಮಿತ ಆರೋಗ್ಯ ತಪಾಸಣೆಗೆಂದು ಕಮಲ್​ ಹಾಸನ್​ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇನ್ನೆರಡು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಇಂದು (ನ.24) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ನವೆಂಬರ್ 23 ರಂದು, ಕಮಲ್ ಹಾಸನ್ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತು. ಹೈದರಾಬಾದ್​ನಿಂದ ಮರಳಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಎಸ್​ಆರ್​ಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರಿಗೆ ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳಲು ಒಂದೆರಡು ದಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಚಿಕಿತ್ಸೆ ಪಡೆದು ಗುರುವಾರ ಕಮಲ್ ಹಾಸನ್ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನು ಕಮಲ್ ಹಾಸನ್ ಅವರ ವೃತ್ತಿ ಜೀವನದ ವಿಚಾರಕ್ಕೆ ಬರುವುದಾದರೆ, ಪ್ರಸ್ತುತ ಬಿಗ್ ಬಾಸ್ ತಮಿಳು ಸೀಸನ್ 6 ಅನ್ನು ನಿರೂಪಣೆ ಮಾಡುವಲ್ಲಿ ನಿರತರಾಗಿದ್ದಾರೆ. ಅಲ್ಲದೆ, ನಿರ್ದೇಶಕ ಶಂಕರ್ ಅವರ ಇಂಡಿಯನ್ 2 ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇಂಡಿಯನ್ 2 ಶೂಟಿಂಗ್​ ಮುಗಿದರೆ, ನಿರ್ದೇಶಕ ಮಣಿರತ್ನಂ ಅವರೊಂದಿಗೆ KH 234 ಗಾಗಿ ಕೈಜೋಡಿಸಲಿದ್ದಾರೆ. ಅಲ್ಲದೆ, ನಿರ್ದೇಶಕ ಪಾ ರಂಜಿತ್ ಅವರಿಗೂ ಕಾಲ್​ಶೀಟ್​ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)