ಸಿನಿವಾಣಿ

ಕಳರಿಪಯಟ್ಟು ಗುರುವಾಗಲಿದ್ದಾರೆ ಖಡಕ್​ ನಟ ಕಿಶೋರ್​

ಖಡಕ್ ಪೊಲೀಸ್ ಆಫೀಸರ್ ಎಂದರೆ ಮೊದಲು ನೆನಪಾಗುವುದು ನಟ ಕಿಶೋರ್. ಆದರೆ ಅವರೀಗ ‘ದೇಹಿ’ ಎನ್ನುತ್ತಿದ್ದಾರೆ. ಹಾಗಂತ ಅವರು ಯಾರಲ್ಲೂ ಏನನ್ನೂ ಕೇಳುತ್ತಿಲ್ಲ, ಬದಲಿಗೆ ತಾವೇ ಹೇಳಿಕೊಡುತ್ತಿದ್ದಾರೆ. ಅಂದರೆ ‘ದೇಹಿ’ ಶೀರ್ಷಿಕೆಯ ಚಿತ್ರದಲ್ಲಿ ಅವರು ಆತ್ಮರಕ್ಷಣಾ ಕಲೆಯಾದ ಕಳರಿಪಯಟ್ಟುವಿನ ಪಟ್ಟು ಹೇಳಿಕೊಡುವ ಗುರುವಾಗಿದ್ದಾರೆ. ಅವರ ಅಭಿನಯದ ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಇತ್ತೀಚೆಗೆ ಚಲನಚಿತ್ರ ಕಲಾವಿದರ ಸಂಘದಲ್ಲಿ ನೆರವೇರಿತು.

ಜಯಮೋಹನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಸಿನಿಮಾಗೆ ನಿರ್ದೇಶಕ ಧನ್, ಆಕ್ಷನ್-ಕಟ್ ಹೇಳಿದ್ದಾರೆ. ‘ತಮಿಳಿನಲ್ಲಿ ನಾನು ಎರಡು ಚಿತ್ರಗಳನ್ನು ಮಾಡಿದ್ದರೂ ಕನ್ನಡಕ್ಕೆ ಹೊಸಬ. ಕಳರಿಪಯಟ್ಟು ಕಲೆ ನನಗೆ ತುಂಬ ಇಷ್ಟ. ಅದರ ಕುರಿತಾಗಿಯೇ ಸಿನಿಮಾ ಮಾಡುವ ಅವಕಾಶ ಸಿಕ್ಕಿದ್ದು ಖುಷಿ ಕೊಟ್ಟಿತ್ತು. ನನ್ನ ಅನುಭವ ಬಳಸಿ ಒಂದೊಳ್ಳೆಯ ಚಿತ್ರ ಮಾಡಿದ್ದೇನೆ’ ಎಂದರು ಧನ್.

‘ಕಳರಿಪಯಟ್ಟು ಪುರಾತನ ಕಲೆ. ಇದರಿಂದ ಏಕಾಗ್ರತೆ, ಆತ್ಮವಿಶ್ವಾಸ ವೃದ್ಧಿಸುತ್ತದೆ. ಅದರಲ್ಲೂ ಇಂದಿನ ಯುವತಿಯರಿಗೆ ಈ ಕಲೆ ಬಹಳ ಅಗತ್ಯ. ಈ ಚಿತ್ರದ ಕಥೆ ಈಗಿನ ಸಂದರ್ಭಕ್ಕೆ ಪ್ರಸ್ತುತವಾಗಿದೆ. ಇದು ಮಹಿಳಾ ಪ್ರಧಾನ ಕಥೆಯಾಗಿದೆ’ ಎಂದರು ನಿರ್ದೇಶಕರು. ವಿಶೇಷ ಎಂದರೆ ಕಳರಿಪಯಟ್ಟು ತರಬೇತುದಾರರಾಗಿರುವ ರಂಜನ್ ಮುಲ್ಲರತ್ ಈ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ವಪಕರಾಗಿದ್ದಾರೆ. ಕಳರಿಯಪಟ್ಟು ಗುರುವಾಗಿ ಕಿಶೋರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜತೆಗೆ ಚಿಕ್ಕಗುಬ್ಬಿ ಗುರುಕುಲದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಉಪಾಸನಾ ಅಭಿನಯಿಸಿದ್ದಾರೆ. ನಟ ವಿಜಯ ರಾಘವೇಂದ್ರ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ಧ್ವನಿಸುರುಳಿ ಬಿಡುಗಡೆ ಮಾಡಿದರು. ಮಾತ್ರವಲ್ಲ, ಈ ಹಿಂದೆ ‘ಕಲ್ಲರಳಿ ಹೂವಾಗಿ’ ಸಿನಿಮಾಕ್ಕಾಗಿ ತಾವು ಕಳರಿಪಯಟ್ಟು ಕಲಿತು ಅಭಿನಯಿಸಿದ್ದನ್ನು ಸ್ಮರಿಸಿಕೊಂಡರು. ನವೀನ್ ಪೌಲ್ ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ರಾಜ್ಯದಲ್ಲಿ ಜ. 24ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.