Kajal Agarwal: ಶಂಕರ್ ನಿರ್ದೇಶನದ ಹಾಗೂ ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಇಂಡಿಯನ್ 2' ಚಿತ್ರದ ಚಿತ್ರೀಕರಣದ ವೇಳೆ ನಡೆದ ಭೀಕರ ಅಪಘಾತವನ್ನು ನೆನೆದ ತೆಲುಗು ನಟಿ ಕಾಜಲ್ ಅಗರ್ವಾಲ್ ಭಾವುಕರಾಗಿ ಮಾತನಾಡಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ'ದಲ್ಲಿ ಮಂಡೋದರಿ ಪಾತ್ರದಲ್ಲಿ ಮಿಂಚಿರುವ ಕಾಜಲ್, ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಹಳೆಯ ಕಹಿ ಘಟನೆಯೊಂದರ ಕುರಿತು ತಮ್ಮ ಮನದಾಳದ ಮಾತುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. 2020ರಲ್ಲಿ ಇಡೀ ಚಿತ್ರೋದ್ಯಮವನ್ನೇ ಬೆಚ್ಚಿಬೀಳಿಸಿದ್ದ ಈ ಘಟನೆ ನಡೆದು ಆರು ವರ್ಷಗಳೇ ಕಳೆದಿದ್ದರೂ, ಆ ದಿನದ ಕಹಿ ನೆನಪುಗಳು ಇನ್ನೂ ತಮ್ನನ್ನು ಕಾಡುತ್ತಿವೆ ಎಂದು ನಟಿ ಹೇಳಿಕೊಂಡಿದ್ದಾರೆ.
2020ರ ಫೆಬ್ರವರಿಯಲ್ಲಿ, ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ 'ಇಂಡಿಯನ್ 2' ಚಿತ್ರದ ಬೃಹತ್ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿತ್ತು. ಆ ಸಮಯದಲ್ಲಿ, ಸುಮಾರು 100 ಅಡಿ ಎತ್ತರದ ಬೃಹತ್ ಕ್ರೇನ್ ಇದ್ದಕ್ಕಿದ್ದಂತೆ ಕುಸಿದು ಬಿದ್ದು, ದುರಂತದಲ್ಲಿ ಚಿತ್ರತಂಡದ ಮೂವರು ಸದಸ್ಯರು ಸ್ಥಳದಲ್ಲೇ ಮೃತಪಟ್ಟರು ಮತ್ತು ಹಲವರು ಗಂಭೀರವಾಗಿ ಗಾಯಗೊಂಡರು. ಇದು ಇಡೀ ಚಿತ್ರತಂಡಕ್ಕೆ ದೊಡ್ಡ ಆಘಾತ ನೀಡಿತ್ತು. ಇದರಿಂದ ಚಿತ್ರದ ಕೆಲಸಗಳು ತಾತ್ಕಾಲಿಕವಾಗಿ ಕೆಲವು ತಿಂಗಳುಗಳ ಕಾಲ ಮುಂದೂಡಿಕೆಯೂ ಆಗಿತ್ತು.
ಘಟನೆಯನ್ನು ನೆನಪಿಸಿಕೊಂಡ ಕಾಜಲ್, "ನಾನು ಆ ದುರಂತ ನಡೆದ ಸ್ಥಳಕ್ಕೆ ಬಹಳ ಹತ್ತಿರದಲ್ಲೇ ಕುಳಿತು ಮಾನಿಟರ್ ನೋಡುತ್ತಿದ್ದೆ. ಇದ್ದಕ್ಕಿದ್ದಂತೆ ಎಲ್ಲರೂ ಭಯದಿಂದ ಓಡುವುದನ್ನು ನೋಡಿ, ಏನಾಗುತ್ತಿದೆ ಎಂದು ತಿಳಿಯದೆ ನಾನೂ ಎದ್ದು ಓಡಿದೆ. ಆದರೆ, ಆತಂಕದಲ್ಲಿ ಅಲ್ಲಿದ್ದ ಟೇಬಲ್ಗೆ ಡಿಕ್ಕಿ ಹೊಡೆದು, ಕೆಳಗೆ ಬಿದ್ದೆ. ಹಿಂತಿರುಗಿ ನೋಡಿದಾಗ, ಅಷ್ಟು ಎತ್ತರದಲ್ಲಿದ್ದ ಕ್ರೇನ್ ನೇರವಾಗಿ ನನ್ನ ಮೇಲೆ ಬೀಳುವಂತೆ ಬಂದಿತು. ಪವಾಡ ಸದೃಶ್ಯ ಎನ್ನುವಂತೆ ಯಾರೋ ನನ್ನನ್ನು ಹಿಂದಿನಿಂದ ಎಳೆದರು" ಎಂದಿದ್ದಾರೆ.
ಆ ಕ್ಷಣದಲ್ಲಿ ಸಾವೇ ನನ್ನ ಕಣ್ಣ ಮುಂದೆ ಬಂದಿದ್ದನ್ನು ನಾನು ನೋಡಿದೆ. ನಾನು ಬಿದ್ದಿದ್ದ ಜಾಗಕ್ಕೆ ಬಹಳ ಹತ್ತಿರದಲ್ಲೇ ಕ್ರೇನ್ ನೆಲಕ್ಕೆ ಅಪ್ಪಳಿಸಿತು. ಅದೇ ಸಮಯಕ್ಕೆ, ಯಾರೋ ನನ್ನನ್ನು ಹಿಂದಕ್ಕೆ ಎಳೆದರು. ಈಗಲೂ ಅಂದು ನನ್ನನ್ನು ಎಳೆದವರು ಯಾರೆಂಬುದೇ ನನಗೆ ಗೊತ್ತಾಗಿಲ್ಲ. ಎಲ್ಲವೂ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ನಡೆದುಹೋಯಿತು. ನನ್ನ ಜೀವನದಲ್ಲಿ ನಾನು ಕಂಡ ಅತ್ಯಂತ ಭೀಕರ ದುರಂತ ಇದು. ವಾಸ್ತವವಾಗಿ, ಆ ಅಪಘಾತದಲ್ಲಿ ನಾನೇ ಮೊದಲು ಪ್ರಾಣ ಕಳೆದುಕೊಳ್ಳಬೇಕಿತ್ತು. ಆದರೆ, ಕಾಣದ ಶಕ್ತಿಯೊಂದು ನನ್ನನ್ನು ಉಳಿಸಿತು" ಎಂದು ಹೇಳುತ್ತಾ ಕಾಜಲ್ ಭಾವುಕರಾದರು.
ಈ ದುರದೃಷ್ಟಕರ ಘಟನೆಯಲ್ಲಿ ಸಹಾಯಕ ನಿರ್ದೇಶಕ ಕೃಷ್ಣ, ಕಲಾ ಸಹಾಯಕ ಚಂದ್ರನ್ ಮತ್ತು ಪ್ರೊಡಕ್ಷನ್ ಅಸಿಸ್ಟೆಂಟ್ ಮಧು ಅವರು ತಮ್ಮ ಅಮೂಲ್ಯ ಜೀವಗಳನ್ನು ಕಳೆದುಕೊಂಡರು ಎಂದು ವರದಿಯಾಗಿದೆ,(ಏಜೆನ್ಸೀಸ್).