ಸಿನಿವಾಣಿ

‘ಆಚಾರ್ಯ’ದಿಂದ ಕಾಜಲ್ ಔಟ್? ... ಮತ್ತೆ ಸಮಸ್ಯೆಯಲ್ಲಿ ‘ಮೆಗಾಸ್ಟಾರ್’ ಚಿತ್ರ

ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಚಿತ್ರವೆಂದರೆ ಅದು ಚಿರಂಜೀವಿ ಅಭಿನಯದ ‘ಆಚಾರ್ಯ’. ಈ ಚಿತ್ರದ ಚಿತ್ರೀಕರಣವೇ ಇನ್ನೂ ಪೂರ್ಣಪ್ರಮಾಣದಲ್ಲಿ ಪ್ರಾರಂಭವಾಗಿಲ್ಲ. ಆದರೆ, ಕಳೆದ ಒಂದು ವರ್ಷದಿಂದ ಒಂದಲ್ಲ ಒಂದು ಕಾರಣಕ್ಕೆ ಚಿತ್ರ ಸುದ್ದಿಯಲ್ಲಿದ್ದೇ ಇದೆ.

ಎಲ್ಲಾ ಸರಿ, ಈಗೇನಾಯಿತು ಎಂಬ ಪ್ರಶ್ನೆ ಬರುವುದು ಸಹಜ. ವಿಷಯ ಏನೆಂದರೆ, ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ಕಾಜಲ್ ಅಗರವಾಲ್, ಈಗ ಚಿತ್ರದಿಂದ ಹೊರಬಂದಿದ್ದಾರೆ ಎಂಬ ವಿಷಯ ಸಿಕ್ಕಾಪಟ್ಟೆ ಕೇಳಿ ಬರುತ್ತಿದೆ. ಕಾಜಲ್ ಒಂದು ತಮಿಳು ಚಿತ್ರಕ್ಕೆ ಡೇಟ್ಸ್ ಕೊಟ್ಟಿದ್ದರಂತೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಆ ಚಿತ್ರದ ಚಿತ್ರೀಕರಣ ಇಷ್ಟರಲ್ಲಾಗಲೇ ಶುರುವಾಗಬೇಕಿತ್ತು. ಆದರೆ, ಲಾಕ್‌ಡೌನ್ ಕಾರಣ ಚಿತ್ರದ ಚಿತ್ರೀಕರಣ ಮಾಡುವಂತಿಲ್ಲ. ಹಾಗಾಗಿ ಲಾಕ್‌ಡೌನ್ ಮುಗಿಯುತ್ತಿದ್ದಂತೆಯೇ ಆ ಚಿತ್ರದ ಚಿತ್ರೀಕರಣ ಶುರು ಮಾಡಬೇಕು ಎಂದು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆಯಂತೆ.

ಇನ್ನು ‘ಆಚಾರ್ಯ’ ಚಿತ್ರದ ಚಿತ್ರೀಕರಣ ಸಹ ಲಾಕ್‌ಡೌನ್ ಮುಗಿದ ಮೇಲೆ ಪ್ರಾರಂಭವಾಗಲಿದೆ. ಒಂದೇ ಸಮಯದಲ್ಲಿ ಎರಡೆರೆಡು ಚಿತ್ರಗಳಲ್ಲಿ ನಟಿಸುವುದು ಕಷ್ಟ. ಹಾಗಾಗಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೀಗ ಕಾಜಲ್‌ಗೆ ಇದ್ದು, ಅವರು ‘ಆಚಾರ್ಯ’ ಚಿತ್ರವನ್ನು ಬಿಟ್ಟು ತಮಿಳು ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ನಿಜವೇ ಆದರೆ, ‘ಆಚಾರ್ಯ’ ಚಿತ್ರಕ್ಕೆ ಹೊಸ ನಾಯಕಿಯ ಆಗಮನವಾಗಲಿದೆ.

‘ಆಚಾರ್ಯ’ ಚಿತ್ರದ ನಾಯಕಿ ಬದಲಾಗುತ್ತಿರುವುದು ಇದು ಮೊದಲನೆಯ ಬಾರಿಯೇನಲ್ಲ. ಇದಕ್ಕೂ ಮುನ್ನ ತ್ರಿಷಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ, ಅವರು ಏನೋ ಕಾರಣ ಹೇಳಿ, ಚಿತ್ರದಿಂದ ಹೊರನಡೆದಿದ್ದರು. ಆಗ ಅವರ ಜಾಗಕ್ಕೆ ಬಂದಿದ್ದೇ ಕಾಜಲ್. ಇನ್ನು ಸಮಸ್ಯೆಗಳೆಲ್ಲಾ ಬಗೆಹರಿದು, ಚಿತ್ರೀಕರಣ ಶುರು ಮಾಡಬಹುದು ಎಂದು ಚಿತ್ರತಂಡ ನಿಟ್ಟುಸಿರುಬಿಡುತ್ತಿರುವಾಗಲೇ ಲಾಕ್‌ಡೌನ್ ಶುರುವಾಗಿದೆ. ಲಾಕ್‌ಡೌನ್ ಮುಗಿಯುತ್ತಿದ್ದಂತೆಯೇ ಮತ್ತೊಬ್ಬ ನಾಯಕಿಯ ಹುಡುಕಾಟ ಅನಿವಾರ್ಯವಾಗಿದೆ.