ಸಿನಿವಾಣಿ

ಮೆಹಬೂಬ ಚಿತ್ರಕ್ಕೆ ಬದಲಾದ ಕಬೀರ್

ಬೆಂಗಳೂರು: ‘ಪೈಲ್ವಾನ್’ ಸಿನಿಮಾದಲ್ಲಿ ಖಡಕ್ ಖಳನಾಗಿ ಕಾಣಿಸಿಕೊಂಡಿದ್ದ ನಟ ಕಬೀರ್ ದುಹಾನ್ ಸಿಂಗ್, ಈಗ ಪೊಲೀಸ್ ಆಫೀಸರ್ ಆಗಿದ್ದಾರೆ. ಗಡ್ಡಕ್ಕೆ ಕತ್ತರಿ ಹಾಕಿ ಕ್ಲೀನ್ ಶೇವ್ ಲುಕ್​ನಲ್ಲಿ ಖಾಕಿ ಗತ್ತಿನಲ್ಲಿ ಬಂದಿದ್ದಾರೆ. ಹಾಗಂತ ರಿಯಲ್ ಲೈಫ್​ನಲ್ಲಿ ಪೊಲೀಸ್ ಆಗಿಲ್ಲ. ಬದಲಿಗೆ ‘ಬಿಗ್​ಬಾಸ್’ ಖ್ಯಾತಿಯ ಶಶಿ ನಾಯಕನಾಗಿ ನಟಿಸುತ್ತಿರುವ ‘ಮೆಹಬೂಬ’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಬೀರ್ ನಟಿಸುತ್ತಿದ್ದಾರೆ. ‘ಮೆಹಬೂಬ’ ಚಿತ್ರ ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿಸಿಕೊಂಡಿದೆ. ಸದ್ಯ ಬೆಂಗಳೂರಿನ ಎಚ್​ಎಂಟಿ ಬಳಿ ನಿರ್ವಿುಸಿರುವ ಪೊಲೀಸ್ ಸ್ಟೇಷನ್ ಸೆಟ್​ನಲ್ಲಿ ಎರಡನೇ ಶೆಡ್ಯೂಲ್​ನ ಶೂಟಿಂಗ್ ನಡೆಯುತ್ತಿದೆ. ಈ ಹಿಂದೆ ‘ಕಥಾ ವಿಚಿತ್ರ’ ಸಿನಿಮಾ ನಿರ್ದೇಶನ ಮಾಡಿದ್ದ ಅನೂಪ್ ಅಂಥೋನಿ ‘ಮೆಹಬೂಬ’ ಚಿತ್ರಕ್ಕೂ ನಿರ್ದೇಶನ ಮಾಡುತ್ತಿದ್ದಾರೆ. ‘ನೀರ್​ದೋಸೆ’, ‘ಬ್ಯೂಟಿಫುಲ್ ಮನಸುಗಳು‘ ಚಿತ್ರಗಳನ್ನು ನಿರ್ವಿುಸಿದ್ದ ಪ್ರಸನ್ನ ಬಂಡವಾಳ ಹೂಡುತ್ತಿದ್ದು, ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ, ಕಿರಣ್ ಹಂಪಾಪುರ ಛಾಯಾಗ್ರಹಣ ಹಾಗೂ ಕೆ.ಎಂ. ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ನಾಯಕಿಯಾಗಿ ಪಾವನಾ, ಬುಲೆಟ್ ಪ್ರಕಾಶ್, ಜೈ ಜಗದೀಶ್, ಶಿವರಾಂ, ಮೋಹನ್ ಜುನೇಜ, ಲಯಕೋಕಿಲ, ಕಲ್ಯಾಣಿರಾಜು ಸೇರಿ ಹಲವರು ಪಾತ್ರವರ್ಗದಲ್ಲಿದ್ದಾರೆ.