ಬೆಂಗಳೂರು: ಅದೇನು ಕನ್ನಡ ಚಿತ್ರರಂಗದಿಂದ ಯಾರೂ ಕರೆಯಲೇ ಇಲ್ಲವೋ ಅಥವಾ ಅವಕಾಶ ಸಿಕ್ಕರೂ ನಟಿಸುವುದಕ್ಕೆ ಸಾಧ್ಯವಾಗಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಐದು ದಶಕಗಳಾದರೂ, ದೇಶ-ವಿದೇಶಗಳ ಹಲವಾರು ಭಾಷೆಗಳ ಚಿತ್ರಗಳಲ್ಲಿ ನಟಿಸಿದರೂ, ಅದ್ಯಾಕೋ ಹಿರಿಯ ನಟ ಕಬೀರ್ ಬೇಡಿ, ಕನ್ನಡದ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ಈಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸುತ್ತಿರುವ ‘ಹಂಟರ್’ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ.
ಕಬೀರ್ ಬೇಡಿ, ಜೇಮ್್ಸ ಬಾಂಡ್ ಚಿತ್ರದಲ್ಲಿ (ಆಕ್ಟೋಪುಸ್ಸಿ) ನಟಿಸಿದವರು. ಇಟಲಿಯ ಜನಪ್ರಿಯ ಟಿವಿ ಸರಣಿ ‘ಸಂದೋಕೇನ್’ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಇನ್ನು, ಹಿಂದಿಯಲ್ಲಿ ನಾಯಕನಾಗಿ, ಖಳನಾಯಕನಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಅವರು ‘ಹಂಟರ್’ನಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಅದರಲ್ಲಿ ಭಾಗವಹಿಸಿದ್ದಾರೆ.
ಅಂದಹಾಗೆ, ‘ಹಂಟರ್’ ಚಿತ್ರದಲ್ಲಿ ನಿರಂಜನ್ಗೆ ನಾಯಕಿಯಾಗಿ ಸೌಮ್ಯ ಮೆನನ್ ನಟಿಸುತ್ತಿದ್ದು, ಮಿಕ್ಕಂತೆ ಸಾಧು ಕೋಕಿಲ, ಅಚ್ಯುತ್ ಕುಮಾರ್ ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ತ್ರಿವಿಕ್ರಮ ಸಾಫಲ್ಯ ನಿರ್ವಿುಸಿದರೆ, ವಿನಯ್ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ.