ಬೆಂಗಳೂರು: ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮೊದಲ ಬಾರಿಗೆ ನಿರ್ಮಿಸುತ್ತಿರುವ, ಸಂಗೀತ ನಿರ್ದೇಶಕಿ ಸಿ.ಆರ್. ಬಾಬಿ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ, ಶೈನ್ ಶೆಟ್ಟಿ, ಅಂಕಿತಾ ಅಮರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ‘ಜಸ್ಟ್ ಮ್ಯಾರೀಡ್’. ಇದೇ 22ರಂದು ಚಿತ್ರ ರಿಲೀಸ್ ಆಗುತ್ತಿದ್ದು, ಈಗಾಗಲೇ ತಂಡ ಪ್ರಚಾರದಲ್ಲಿ ಬಿಜಿಯಾಗಿದೆ. ಇತ್ತೀಚೆಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ‘ಜಸ್ಟ್ ಮ್ಯಾರೀಡ್’ ಟ್ರೇಲರ್ ಬಿಡುಗಡೆಗೊಳಿಸಿ, ತಂಡಕ್ಕೆ ಶುಭಹಾರೈಸಿದರು. ಟ್ರೇಲರ್ ಬಿಡುಗಡೆ ಸಮಾರಂಭವನ್ನು ಮದುವೆಯಂತೆಯೇ ಆಚರಿಸಿದ್ದು ಕಾರ್ಯಕ್ರಮದ ಆಕರ್ಷಣೆಯಾಗಿತ್ತು.
ಸಿ.ಆರ್. ಬಾಬಿ, ‘ತಂತ್ರಜ್ಞರು ಮತ್ತು ಕಲಾವಿದರ ಸಹಕಾರದಿಂದಾಗಿ ನಿಗದಿತ ಯೋಜನೆಗಿಂತ ಮುನ್ನವೇ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಸಿನಿಮಾ ಈಗ ರಿಲೀಸ್ ಆಗುತ್ತಿರುವುದಕ್ಕೆ ಖುಷಿಯಿದೆ’ ಎಂದರು. ನಾಯಕ ಶೈನ್ ಶೆಟ್ಟಿ, ‘‘ಕಾಂತಾರ’ ತೆರೆಕಂಡ ಸಮಯದಲ್ಲಿ ಅಜನೀಶ್ ಅವರಿಂದ ಕರೆ ಬಂತು. ನಾನೊಂದು ಸಿನಿಮಾ ನಿರ್ಮಿಸುತ್ತಿದ್ದೇನೆ, ನೀವು ನಾಯಕನಾಗಿ ನಟಿಸಬೇಕು ಎಂದರು. ಬಳಿಕ ಬಾಬಿ ಅವರು ಹೇಳಿದ ಕಥೆ ಇಷ್ಟವಾಯಿತು. ಹಿರಿಯ ಕಲಾವಿದರ ಜತೆ ಅಭಿನಯಿಸಿರುವುದು ನನಗೆ ಮತ್ತೊಂದು ಕಲಿಕೆ’ ಎಂದು ಮಾಹಿತಿ ನೀಡಿದರು. ‘ಕನಸು, ಕೆಲಸ ಹಾಗೂ ಕಥೆ ಇವು ಈ ಸಿನಿಮಾದಿಂದ ಸಾಕಾರಗೊಂಡಿದೆ. ಇದು ನನ್ನ ಎರಡನೇ ಸಿನಿಮಾ. ಇಷ್ಟು ಚಿಕ್ಕ ಜರ್ನಿಯಲ್ಲಿ ದೊಡ್ಡ ಕಲಾವಿದರ ಜತೆ ಕೆಲಸ ಮಾಡಿದ್ದು ತುಂಬಾ ವಿಶೇಷ’ ಎಂದು ನಾಯಕಿ ಅಂಕಿತಾ ಅಮರ್ ಸಂತಸ ಹಂಚಿಕೊಂಡರು. ಇನ್ನು ಬಹುತಾರಾಗಣವಿರುವ ಈ ಚಿತ್ರದಲ್ಲಿ ದೇವರಾಜ್, ಶ್ರುತಿ, ಮಾಳವಿಕಾ ಅವಿನಾಶ್, ತೆಲುಗು ನಟ ಶ್ರೀಮಾನ್, ಅನೂಪ್ ಭಂಡಾರಿ, ವಾಣಿ ಹರಿಕೃಷ್ಣ, ಅಭಿನವ್, ವೇದಿಕಾ ಪ್ರಮುಖ ತಾರಾಗಣದಲ್ಲಿ ಅಭಿನಯಿಸಿದ್ದಾರೆ.