ಬೆಂಗಳೂರು : ಕನ್ನಡ ಚಿತ್ರರಂಗದಲ್ಲೂ ಹಲವಾರು ಮಹಿಳೆಯರು ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರೇಮಾ ಕಾರಂತ್, ವಿಜಯಕ್ಷ್ಮೀ ಸಿಂಗ್, ಕವಿತಾ ಲಂಕೇಶ್, ಸುಮನಾ ಕಿತ್ತೂರು, ರೂಪಾ ಅಯ್ಯರ್ ಹೀಗೆ ಪಟ್ಟಿ ಸಾಗುತ್ತದೆ. ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗುತ್ತಿದ್ದಾರೆ ನಿರ್ದೇಶಕಿ ಸಿ.ಆರ್.ಬಾಬಿ. ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ಬಾಬಿ, ಇದೀಗ ‘ಜಸ್ಟ್ ಮ್ಯಾರೀಡ್’ ಮೂಲಕ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ. ಬಹು ತಾರಾಗಣ ಹಾಗೂ ಎರಡು ಸಾಂಗ್‌ಗಳ ಮೂಲಕ ಈ ಚಿತ್ರ ಈಗಾಗಲೇ ಸದ್ದು ಮಾಡಿದ್ದು, ರಿಲೀಸ್ ಸಿದ್ಧವಾಗಿದೆ. ‘ಬಿಗ್‌ಬಾಸ್ ಕನ್ನಡ ಸೀಸನ್-7’ರ ವಿಜೇತ ಶೈನ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದು, ಅವರಿಗೆ ‘ಇಬ್ಬನಿ ತಬ್ಬಿದ ಇಳೆಯಲಿ’ ಖ್ಯಾತಿಯ ಅಂಕಿತಾ ಅಮರ್ ಜೋಡಿಯಾಗಿದ್ದಾರೆ. ಇತ್ತೀಚೆಗೆ ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ ದೊರೆತಿದೆ. ಇದೇ ವರಮಹಾಕ್ಷ್ಮೀ ಹಬ್ಬಕ್ಕೆ ‘ಜಸ್ಟ್ ಮ್ಯಾರೀಡ್’ ಪ್ರೇಕ್ಷಕರ ಮುಂದೆ ಬರಲು ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ‘ವಿಜಯವಾಣಿ’ಗೆ ಮಾಹಿತಿ ನೀಡಿದ ನಿರ್ದೇಶಕಿ ಬಾಬಿ, ‘ನನ್ನ ಜೀವನದಲ್ಲಿ ನಡೆದಿರುವ ಹಲವಾರು ಘಟನೆಗಳಿಂದ ಸ್ಫೂರ್ತಿಗೊಂಡು ಕೆಲ ಕಾಲ್ಪನಿಕ ಅಂಶಗಳನ್ನು ಸೇರಿಸಿ, ಈ ಕಥೆ ಸಿದ್ಧಗೊಳಿಸಿದೆ. ಯುವಕರು, ಪಾಲಕರು ಅಥವಾ ಹಿರಿಯ ನಾಗರಿಕರಾಗಲಿ ಎಲ್ಲರೂ ತಮ್ಮ ಬದುಕನ್ನು ಅನುಭವಿಸಬೇಕು. ಎಲ್ಲ ಸಂಬಂಧಗಳನ್ನು ಅರ್ಥ ಮಾಡಿಕೊಂಡು, ಸಹಬಾಳ್ವೆಯಿಂದ ಬದುಕಬೇಕು. ಹಿರಿಯರು ಯುವಕರನ್ನು ದೂರುವುದಾಗಲಿ ಅಥವಾ ಯಂಗ್‌ಸ್ಟರ್‌ಗಳು ಪಾಲಕರನ್ನು ಮನೆಯಿಂದ ಹೊರಹಾಕುವುದಾಗಲಿ ಮಾಡುವುದು ಬೇಡ ಎಂಬ ಸಂದೇಶವನ್ನು ಈ ಮೂಲಕ ಹೇಳಿದ್ದೇವೆ. ಎಮೋಷನ್ಸ್ ಜತೆಗೆ ನವಿರಾದ ರೊಮ್ಯಾಂಟಿಕ್ ಕಥೆ ಇದು. ನಾಯಕ ಶೈನ್ ನಿಜ ಜೀವನದಲ್ಲೂ ತುಂಟ. ಈ ತುಂಟತನದ ಜತೆಗೆ ಅವನಲ್ಲಿ ಗಂಭೀರತೆ ಇದೆ. ಹಾಗಾಗಿ, ಆತನನ್ನು ಆಯ್ಕೆ ಮಾಡಿಕೊಂಡೆವು. ಇನ್ನು ಅಂಕಿತಾ ಅಮರ್ ಪ್ರಬುದ್ಧ ಹುಡುಗಿ. ಇಬ್ಬರಂತೆಯೇ ಪಾತ್ರಗಳು ಹಾಗೇ ಇವೆ. ದೇವರಾಜ್ ಸರ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನಲ್ಲಿ ಚಿತ್ರದ ಶೂಟಿಂಗ್ ಮಾಡಿದ್ದೇವೆ’ ಎಂದರು.
ಮೊದಲ ಬಾರಿಗೆ ನಿರ್ದೇಶನದ ಸವಾಲಿನ ಬಗ್ಗೆ ಸಿ.ಆರ್.ಬಾಬಿ. ‘ನಮ್ಮ ಕೆಲಸಗಳಿಗೆ ತಂಡವೊಂದು ಬೆಂಬಲವಾಗಿ ನಿಂತರೆ ನಮಗೆ ಯಾವುದೂ ಕಷ್ಟವಾಗುವುದಿಲ್ಲ. ಹಾಗೇ ನನಗೂ ನನ್ನ ತಂಡ ಬೆಂಬಲವಾಗಿತ್ತು. ಹೀಗಾಗಿ ಕಷ್ಟ ಅಂತ ಅನ್ನಿಸಲಿಲ್ಲ. ಹಲವು ವರ್ಷಗಳಿಂದ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಕಾರಣ ನನಗೆ ಕಷ್ಟವಾಗಲಿಲ್ಲ’ ಎಂದು ಖುಷಿ ಹಂಚಿಕೊಂಡರು. ‘ಕನ್ನಡ ತಂತ್ರಜ್ಞರೇ ನಿರ್ಮಿಸಿರುವ ಚಿತ್ರವಿದು. ಸದ್ಯಕ್ಕೆ ಕನ್ನಡದಲ್ಲಿ ಮಾತ್ರ ಮೂಡಿಬರಲಿದೆ. ಗುಣಮಟ್ಟದಲ್ಲಿ ಕನ್ನಡ ಚಿತ್ರಗಳು ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಲು ಪರಭಾಷೆಯ ಕಲಾವಿದರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ’ ಎಂದು ಹೇಳಿಕೊಳ್ಳುತ್ತಾರೆ.
ರೊಮ್ಯಾಂಟಿಕ್ ಫ್ಯಾಮಿಲಿ ಡ್ರಾಮಾ ಜಾನರ್‌ನ ‘ಜಸ್ಟ್ ಮ್ಯಾರೀಡ್’ ಬಳಿಕ ಸಿ.ಆರ್.ಬಾಬಿ ಆ್ಯಕ್ಷನ್-ಡ್ರಾಮಾ ಚಿತ್ರ ನಿರ್ದೇಶಿಸಲಿದ್ದಾರಂತೆ. ಈಗಾಗಲೇ ಕಥೆ ಪೂರ್ಣಗೊಳಿಸಿರುವ ಅವರು, ಸದ್ಯದಲ್ಲೇ ಪ್ರಿ-ಪ್ರೊಡಕ್ಷನ್ ಆರಂಭಿಸಲಿದ್ದು, ಕೆಲವೇ ದಿನಗಳಲ್ಲಿ ಹೊಸ ಪ್ರಾಜೆಕ್ಟ್ ಘೋಷಿಸಲಿದ್ದಾರೆ.