ಸಿನಿವಾಣಿ

junior movie review: ಸೀನಿಯರ್-ಜೂನಿಯರ್ ಭಾವತೀವ್ರಯಾನ

ಶಿವಮಲ್ಲಯ್ಯ ಸ್ಥಾವರಮಠ

ಚಿತ್ರ: ಜೂನಿಯರ್

ನಿರ್ದೇಶನ: ರಾಧಾಕೃಷ್ಣ

ತಾರಾಗಣ: ಕಿರೀಟಿ, ಶ್ರೀಲೀಲಾ, ರವಿಚಂದ್ರನ್, ಜೆನಿಲಿಯಾ, ಅಚ್ಯುತ್ ಕುಮಾರ್, ಕಿರಣ್ ಶ್ರೀನಿವಾಸ್ ಮತ್ತಿತರರು.

ಶಿವ ಸ್ಥಾವರಮಠ

‘ಹೊಟ್ಟೆಯಲ್ಲಿರುವ ಮಗುವಿಗೋಸ್ಕರ ನಮ್ಮ ನೋವನ್ನೆಲ್ಲ ಈ ಊರಲ್ಲಿ ಬಿಟ್ಟು, ನಾವು ಎಲ್ಲಿಗಾದರೂ ದೂರ ಹೋಗೋಣ’ ಎಂದು ತುಂಬು ಗರ್ಭಿಣಿ ಶ್ಯಾಮಲಾಗೆ (ಸುಧಾರಾಣಿ), ಗಂಡ ಕೋದಂಡಪಾಣಿ (ರವಿಚಂದ್ರನ್) ಹೇಳುತ್ತಾನೆ. ಬಳಿಕ ದಂಪತಿ ವಿಜಯನಗರ ಬಿಟ್ಟು ದೂರ ಹೋಗುತ್ತಾರೆ. ಕಳೆದುಕೊಂಡಲ್ಲಿ ಸಂತೋಷ ಹುಡುಕು ಎಂಬ ಮಾತಿದೆ. ಆ ಮಾತಿನಂತೆ ಮುಂದೊಂದು ದಿನ ನೋವು ಬಿಟ್ಟು ಹೋದ ಊರಲ್ಲಿ ಹೇಗೆ ಸಂತೋಷ ಹುಡುಕುತ್ತಾರೆ ಎನ್ನುವುದೇ ‘ಜೂನಿಯರ್’ ಮಹತ್ವದ ತಿರುವು. ಒಂದು ಫ್ಯಾಮಿಲಿ ಡ್ರಾಮಾವನ್ನು ರಾಧಾಕೃಷ್ಣ ಅಚ್ಚುಕಟ್ಟಾಗಿ, ಅದ್ದೂರಿಯಾಗಿ ನಿರೂಪಿಸಿದ್ದಾರೆ.

ಕೋದಂಡಪಾಣಿಯ ಮಗ ಅಭಿನವ್‌ಗೆ (ಕಿರೀಟಿ) ತಂದೆಯ ಕಾಳಜಿ ಕಿರಿಕಿರಿ ಎನಿಸಿ, ದೂರದೂರಿಗೆ ಓದಲು ಹೋಗುತ್ತಾನೆ. ಓದು ಮುಗಿದ ಬಳಿಕ ದೊಡ್ಡ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಆದರೆ, ಅಲ್ಲಿಯ ಬಾಸ್ ವಿಜಯಾ ಸೌಜನ್ಯ (ಜೆನಿಲಿಯಾ) ಕೆಂಗಣ್ಣಿಗೆ ಗುರಿಯಾಗುತ್ತಾನೆ. ಅದರ ಲವೇ ಆತನಿಗೆ ಕಂಪನಿಯಲ್ಲಿ ಮಹತ್ವದ ಹುದ್ದೆ ಕೈತಪ್ಪಿಸಿ, ಸಿಎಸ್‌ಆರ್ ನಿಧಿ ನೋಡಿಕೊಳ್ಳುವ ವಿಭಾಗಕ್ಕೆ ಹಾಕಿಸುತ್ತಾಳೆ. ಬಳಿಕ ಅಭಿನವ್ ಕಂಪನಿ ಸಿಎಸ್‌ಆರ್ ನಿಧಿಯ ದುರ್ಬಳಕೆ ಕುರಿತು ಮುಖ್ಯಸ್ಥರ ಗಮನಕ್ಕೆ ತರುತ್ತಾನೆ. ಈ ಮೋಸವನ್ನು ತಪ್ಪಿಸಲು ಇಡೀ ಕಂಪನಿಯ ಆಡಳಿತ ಮಂಡಳಿ ವಿಜಯನಗರಕ್ಕೆ ಶ್‌ಟಿ ಆಗುತ್ತದೆ. ತಂದೆ-ತಾಯಿ ತೊರೆದ ವಿಜಯನಗರವನ್ನು ತಮಗೆ ಗೊತ್ತಿರದಂತೆ ಮಗ ಅಭಿ, ವಿಜಯಾ ಸೇರುತ್ತಾರೆ. ಹಾಗಾದರೆ, ವಿಜಯನಗರದಲ್ಲಿ ಏನಾಗುತ್ತದೆ? ತಿಳಿಯಲು ‘ಜೂನಿಯರ್’ ನೋಡಬೇಕು.

‘ಜೂನಿಯರ್’ ಕಮರ್ಷಿಯಲ್ ಜತೆಗೆ ಫ್ಯಾಮಿಲಿ ಅಂಶಗಳನ್ನು ಹೊಂದಿರುವ ಚಿತ್ರ. ಕನ್ನಡ, ತೆಲುಗು ದ್ವಿಭಾಷೆಗಳಲ್ಲಿ ಮೂಡಿಬಂದಿರುವ ಕಾರಣ ಎರಡೂ ಭಾಷೆಯ ಪ್ರೇಕ್ಷಕರ ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶಕ ರಾಧಾಕೃಷ್ಣ ಕಥೆ ನಿರೂಪಿಸಿದ್ದಾರೆ. ಕಥೆ ಹಾಗೂ ಮೇಕಿಂಗ್‌ನಲ್ಲಿ ಅದ್ದೂರಿತನವಿದೆ. ಮೊದಲರ್ಧದಲ್ಲಿ ಕಾಲೇಜು, ಆಫೀಸ್‌ನಲ್ಲಿ ನ್ ಆ್ಯಂಡ್ ಫೈನ್ ಆಗಿ ಸಾಗಿದರೆ, ದ್ವಿತೀಯಾರ್ಧದಲ್ಲಿ ತಿರುವು ಹಾಗೂ ತೀವ್ರವಾದ ಭಾವನೆಗಳಿವೆ. ಹೀಗಾಗಿ ‘ಜೂನಿಯರ್’ ಸೀಟಿನಂಚಿನಲ್ಲಿ ಕೂರಿಸಿಕೊಂಡು ನೋಡಿಸಿಕೊಳ್ಳುತ್ತದೆ.

ನಟ ಕಿರೀಟಿ ಅದ್ದೂರಿಯಾಗಿ ಎಂಟ್ರಿ ನೀಡಿದ್ದಾರೆ. ನಟನೆ, ಡಾನ್ಸ್‌ನಲ್ಲಿ ಪಾಸ್ ಆಗಿದ್ದಾರೆ. ಇನ್ನು ಶ್ರೀಲೀಲಾ ಪಾತ್ರ ಅಷ್ಟಕ್ಕಷ್ಟೆ. ನಾಲ್ಕೈದು ಸೀನ್‌ಗಳಲ್ಲಿ ಕಾಣಿಸಿಕೊಂಡರೆ, ‘ವೈರಲ್ ವಯ್ಯರಿ’ ಹಾಡಿನಲ್ಲಿ ಜಬರ್ದಸ್ತ್‌ಆಗಿ ಕುಣಿದು ನಂತರ ಕಾಣೆಯಾಗುತ್ತಾರೆ. ರವಿಚಂದ್ರನ್ ಪಾತ್ರ ಕಾಡುತ್ತದೆ. ಜೆನಿಲಿಯಾ ಪಾತ್ರದ ವಿನ್ಯಾಸ ಚೆನ್ನಾಗಿದ್ದು, ಗಟ್ಟಿಗಿತ್ತಿಯಾಗಿ ಕಾಣಿಸಿಕೊಂಡಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ, ಸೆಂಥಿಲ್ ಕುಮಾರ್ ಛಾಯಾಗ್ರಹಣ ಕಥೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ. ತಂದೆ-ಮಕ್ಕಳ ಭಾವತೀವ್ರಯಾನವನ್ನು ‘ಜೂನಿಯರ್’ ಮೂಲಕ ಕಣ್ತುಂಬಿಕೊಳ್ಳಬಹುದು.

ರೇಟಿಂಗ್: 3.5