ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕನ್ನಡ ತಾರೆಯರು ಈಗಾಗಲೇ ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಕಿಚ್ಚ ಸುದೀಪ್, ರಶ್ಮಿಕಾ ಮಂದಣ್ಣ, ಶ್ರೀಲಿಲಾ ಸೇರಿ ಹಲವರು ಬೇರೆ ಚಿತ್ರರಂಗಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ನಿರ್ದೇಶಕರಾದ ಪ್ರಶಾಂತ್ ನೀಲ್, ಹರ್ಷ, ಸಂಗೀತ ನಿರ್ದೇಶಕರಾದ ರವಿ ಬಸ್ರೂರ್, ಅಜನೀಷ್ ಲೋಕನಾಥ್, ಛಾಯಾಗ್ರಾಹಕ ಕಾರ್ತಿಕ್ ಮಳ್ಳೂರ್ ಸೇರಿ ಹಲವರು ಪರಭಾಷೆಗಳಲ್ಲೂ ಬಿಜಿಯಾಗಿದ್ದಾರೆ. ಇವರ ಬೆನ್ನಲ್ಲೇ ಕನ್ನಡದ ಸ್ಟಾರ್ ನಿರ್ದೇಶಕ ಪ್ರೇಮ್ ಕೂಡ ಹಿಂದಿ ಚಿತ್ರರಂಗಕ್ಕೆ ಹೋಗಲಿದ್ದಾರೆ ಎಂಬ ಸುದ್ದಿಯೊಂದು ಇತ್ತೀಚೆಗಷ್ಟೆ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಈ ಬಗ್ಗೆ ವಿಜಯವಾಣಿಗೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಪ್ರೇಮ್, "ಹಿಂದಿಯಲ್ಲಿ ಮೊದಲೂ ನನಗೆ ಅವಕಾಶವಿತ್ತು. ಆದರೆ, ಕನ್ನಡದಲ್ಲಿ ಬಿಜಿಯಿರುವ ಕಾರಣ ಬಾಲಿವುಡ್ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ' ಎಂದಿದ್ದಾರೆ.
"ರೌಡಿ ರಾಥೋಡ್ 2'ಗೆ ಆ್ಯಕ್ಷನ್-ಕಟ್
ಅಕ್ಷಯ್ ಕುಮಾರ್ ಅಭಿನಯಿಸಿದ್ದ, ಪ್ರಭುದೇವ ನಿರ್ದೇಶಿಸಿದ್ದ 2012ರ ಹಿಟ್ ಸಿನಿಮಾ "ರೌಡಿ ರಾಥೋಡ್'. ಇದು ತೆಲುಗಿನ "ವಿಕ್ರಮಾರ್ಕುಡು' ಚಿತ್ರದ ರಿಮೇಕ್ ಆಗಿತ್ತು. ಇದೀಗ 13 ವರ್ಷಗಳ ಬಳಿಕ ಈ ಚಿತ್ರದ ಸೀಕ್ವೆಲ್ ಮಾಡಲು "ದೇವದಾಸ್', "ರಾಮ್ಲೀಲಾ', "ಪದ್ಮಾವತ್' ಸೇರಿ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ, ನಿರ್ಮಾಪಕ ಸಂಜಯ್ ಲೀಲಾ ಭನ್ಸಾಲಿ ಮುಂದಾಗಿದ್ದು, "ರೌಡಿ ರಾಥೋಡ್ 2'ಗೆ ಆ್ಯಕ್ಷನ್-ಕಟ್ ಹೇಳಲು ಕನ್ನಡ ನಿರ್ದೇಶಕ ಪ್ರೇಮ್ಗೆ ಅವಕಾಶ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ನಿರ್ದೇಶಕ ಪ್ರೇಮ್, "ಸದ್ಯ "ಕೆಡಿ & ದ ಡೆವಿಲ್' ರಿಲೀಸ್ಗೆ ರೆಡಿಯಾಗುತ್ತಿದೆ. ನಂತರ ಅದರ ಸೀಕ್ವೆಲ್ ಕೂಡ ಚಿತ್ರೀಕರಣ ಆಗಬೇಕಿದೆ. ಅದರ ಬೆನ್ನಲ್ಲೇ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರ ಜತೆ ಒಂದೊಂದು ಸಿನಿಮಾ ೈನಲ್ ಆಗಿದೆ. ಹೀಗಾಗಿ ಇನ್ನೊಂದೆರಡು ವರ್ಷ ಬಾಲಿವುಡ್ಗೆ ಹೋಗುವುದಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆಯೇ ಬಂದಿತ್ತು ಆಫರ್...
ಅಂದಹಾಗೆ, ಪ್ರೇಮ್ಗೆ ಈ ಹಿಂದೆಯೇ ಬಾಲಿವುಡ್ ಅವಕಾಶ ಬಂದಿತ್ತಂತೆ. ಆ ಬಗ್ಗೆ ಅವರು, "ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಟಿಸುತ್ತಿರುವ "ಸಿಕಂದರ್' ಸಿನಿಮಾ ನಿರ್ದೇಶಿಸಲು ಬಾಲಿವುಡ್ ನಿರ್ಮಾಪಕರಾದ ಸಾಜಿದ್ ನಾಡಿಯಾಡ್ವಾಲಾ ಆರ್ ಮಾಡಿದ್ದರು. ಆದರೆ, ನಾನು ಕನ್ನಡ ಚಿತ್ರಗಳಲ್ಲೇ ಹೆಚ್ಚು ಬಿಜಿಯಿದ್ದ ಕಾರಣ, ಅವಕಾಶ ಒಪ್ಪಿಕೊಂಡಿರಲಿಲ್ಲ. ಹೀಗಾಗಿ "ಸಿಕಂದರ್' ಚಿತ್ರವನ್ನು ತಮಿಳು ನಿರ್ದೇಶಕ ಎ.ಆರ್.ಮುರುಗಾದಾಸ್ ಅವರು ಮಾಡುತ್ತಿದ್ದಾರೆ. ಸದ್ಯಕ್ಕೆ ಇಲ್ಲಿನ ಕಮಿಟ್ಮೆಂಟ್ಗಳನ್ನು ಪೂರ್ಣಗೊಳಿಸಿ, ನಂತರವಷ್ಟೇ ನಾನು ಬಾಲಿವುಡ್ ಬಗ್ಗೆ ಯೋಚಿಸುತ್ತೇನೆ' ಎಂದು ಮಾಹಿತಿ ನೀಡುತ್ತಾರೆ.