ಸಿನಿವಾಣಿ

ಹಿಂದಿಯಲ್ಲಿ ಮಧ್ಯಂತರ: ಬಾಲಿವುಡ್ ಸಿನಿಮಾ ಆಗುತ್ತಿದೆ ಜಯಂತ್ ಕಾಯ್ಕಿಣಿ ಕಥೆ

ಬೆಂಗಳೂರು: ಜಯಂತ್ ಕಾಯ್ಕಿಣಿ ಅವರ ಕಥೆಯನ್ನಾಧರಿಸಿ, ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಎಂಬ ಚಿತ್ರವನ್ನು ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ್ದು ಗೊತ್ತೇ ಇದೆ. ಈಗ ಕಾಯ್ಕಿಣಿ ಅವರ ಇನ್ನೊಂದು ಕಥೆ, ಚಿತ್ರವಾಗುತ್ತಿದೆ. ಈ ಬಾರಿ ಕನ್ನಡದಲ್ಲಲ್ಲ, ಹಿಂದಿಯಲ್ಲಿ. ಹಿಂದಿಯಲ್ಲಿ ‘ಅನ್ಕಹಿ ಕಹಾನಿಯಾ’ ಎಂಬ ಆಂಥಾಲಜಿ (ಕಿರುಚಿತ್ರಗಳ ಗುಚ್ಛ) ನಿರ್ವಣವಾಗಿದ್ದು, ಸೆಪ್ಟೆಂಬರ್ 17ರಿಂದ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿದೆ. ಹೆಸರೇ ಹೇಳುವಂತೆ ಇದುವರೆಗೂ ಯಾರೂ ಕೇಳದ, ಯಾರೂ ಹೇಳದ ಪ್ರೇಮಕಥೆಗಳನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ.

ಈ ಚಿತ್ರದಲ್ಲಿ ಮೂರು ಕಥೆಗಳಿದ್ದು, ಈ ಪೈಕಿ ಜಯಂತ್ ಕಾಯ್ಕಿಣಿ ಅವರ ‘ಮಧ್ಯಂತರ’ ಸಹ ಒಂದು ಎನ್ನುವುದು ವಿಶೇಷ. ಈ ಚಿತ್ರವನ್ನು ಅಭಿಷೇಕ್ ಚೌಬೆ ನಿರ್ದೇಶನ ಮಾಡಿದ್ದು, ರಿಂಕು ರಾಜಗುರು ಮತ್ತು ದೆಲ್ಜಾದ್ ಹಿವಾಲೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಿಕ್ಕ ಇನ್ನೆರಡು ಕಥೆಗಳನ್ನು ಅಶ್ವಿನಿ ಅಯ್ಯರ್ ತಿವಾರಿ ಮತ್ತು ಸಾಕೇತ್ ಚೌಧರಿ ನಿರ್ದೇಶಿಸಿದ್ದಾರೆ. ಆರ್​ಎಸ್​ವಿಪಿ ಮೂವೀಸ್ ಈ ಚಿತ್ರವನ್ನು ನಿರ್ವಿುಸಿದೆ.