ಸಿನಿವಾಣಿ

ಜವಾರಿ ಪ್ರತಿಭೆ ನಿವಿಷ್ಕಾ: ಕನ್ನಡದ ಮೂರು, ತೆಲುಗಿನ ಒಂದು ಚಿತ್ರದಲ್ಲಿ ಬಿಜಿಯಾದ ‘ಮಿಸ್ ಬೆಳಗಾವಿ’

ಬೆಂಗಳೂರು: ಹುಟ್ಟಿದ್ದು ಬೆಳಗಾವಿ, ಓದಿದ್ದು ಧಾರವಾಡ, ಜೀವನ ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಇದು ನಟಿ ನಿವಿಷ್ಕಾ ಪಾಟೀಲ್‌ನ ಬದುಕಿನ ಹಾದಿ. ಚಿಕ್ಕದಿನಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದೆ ಇರುತ್ತಿದ್ದ ಅವರು ಕಲಾವಿದಳಾಗಬೇಕು ಎಂದು ಮಹಾನಗರಕ್ಕೆ ಬಂದವರು. ಆರಂಭದಲ್ಲಿ ‘ಮಾನಸ ಸರೋವರ’ ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ ಬೆಳ್ಳಿತೆರೆಗೂ ಎಂಟ್ರಿ ನೀಡಿ, ‘ಬೆಂಕಿ’, ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಕನ್ನಡದ ಮೂರು ಹಾಗೂ ತೆಲುಗಿನ ಒಂದು ಸಿನಿಮಾದಲ್ಲಿ ಬಿಜಿ ಇರುವ ಉತ್ತರ ಕರ್ನಾಟಕದ ಪ್ರತಿಭೆ ತಮ್ಮ ಮುಂದಿನ ಪ್ರಾಜೆಕ್ಟ್ ಹಾಗೂ ಆರಂಭದ ಬದುಕಿನ ಬಗ್ಗೆ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ. ‘ನಮ್ಮದು ಊರು ಬೆಳಗಾವಿ. ಮೊದಲಿನಿಂದಲೂ ನನಗೆ ಡಾನ್ಸ್, ಭರತನಾಟ್ಯ ಹೀಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ. ಆದರೆ, ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆಯೇನೂ ಇರಲಿಲ್ಲ. ಮಾಡಲಿಂಗ್‌ನಲ್ಲಿ ತೊಡಗಿಸಿಕೊಳ್ಳುತ್ತಿದ್ದೆ.ಒಮ್ಮೆ ‘ಮಿಸ್ ಬೆಳಗಾವಿ’ ಕೂಡ ಆಗಿದ್ದೆ. ಬಳಿಕ ಹೆಚ್ಚು ಸಿನಿಮಾಗಳನ್ನು ನೋಡುತ್ತಿರುವಾಗ ಕಲಾವಿದೆಯಾಗಬೇಕು ಎಂಬ ಆಸೆ ಆಗ ಚಿಗುರೊಡೆಯಿತು. ಇದಕ್ಕೆ ಅಮ್ಮ, ಅಣ್ಣ ಇಬ್ಬರು ಪ್ರೋತ್ಸಾಯಿಸಿದರು. ನಂತರ ಕಿರುತೆರೆ, ಬೆಳ್ಳಿತೆರೆಗೆ ಅವಕಾಶ ಪಡೆದುಕೊಂಡೆ’ ಎಂದು ಕಲಾ ಬದುಕಿನ ಆರಂಭದ ಬಗ್ಗೆ ತಿಳಿಸುತ್ತಾರೆ.

ಜಾಂಟಿಗೆ ಜೋಡಿ: ‘ಸೋಮು ಸೌಂಡ್ ಇಂಜಿನಿಯರ್’ ಬಳಿಕ ನಿವಿಷ್ಕಾ, ಅಜಿತ್ ಜಯರಾಜ್ ನಟನೆಯ ‘ಜಾಂಟಿ ಸನ್ ಆಫ್​ ಜಯರಾಜ್’ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರದ ಬಗ್ಗೆ, ‘ಇದು ಗ್ಯಾಂಗ್‌ಸ್ಟರ್ ಸಿನಿಮಾ. ರಕ್ತವು ಇದೆ, ಪ್ರೀತಿಯೂ ಇದೆ. ಇದರಲ್ಲಿ ನಾನು ಲಲ್ಲಿ ಎಂಬ ಸೌಮ್ಯ ಸ್ವಭಾವದ ಪಾತ್ರ ಮಾಡುತ್ತಿದ್ದೇನೆ. ‘ಬೆಂಕಿ’ ಸಿನಿಮಾ ನೋಡಿದ್ದ ನಿರ್ದೇಶಕ ಆನಂದ್ ರಾಜ್ ಈ ಚಿತ್ರಕ್ಕೆ ಅವಕಾಶ ನೀಡಿದರು. ಮರುದಿನವೇ ಶೂಟಿಂಗ್ ಆರಂಭಿಸಿದ್ದು, ನನಗೆ ಇಂದಿಗೂ ಆಶ್ಚರ್ಯವಾಗಿ ಕಾಣಿಸುತ್ತದೆ. ಅಜಿತ್‌ಗೆ ತದ್ವಿರುದ್ಧದ ಪಾತ್ರ ನನ್ನದು. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ’ ಎಂದು ನಿವಿಷ್ಕಾ ಮಾಹಿತಿ ನೀಡುತ್ತಾರೆ.

ತೆಲುಗಿಗೂ ಡೆಬ್ಯೂ: ನಿವಿಷ್ಕಾ ‘ಜಾಂಟಿ ಸನ್ ಆ್ ಜಯರಾಜ್’ ಜತೆ ಜತೆಗೆ ಕನ್ನಡದ ಎರಡು ಹಾಗೂ ತೆಲುಗಿನ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ‘ಇದರ ಬಳಿಕ ‘ಗಿಣಿರಾಮ’ ನಟ ರಿತ್ವಿಕ್ ಅಭಿನಯದ ‘ಕಲ್‌ಸಕ್ರೆ’ ಹಾಗೂ ಪವನ್ ಒಡೆಯರ್ ತಂಡದ ಇನ್ನು ಹೆಸರಿಡದ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಈ ಎರಡು ಸಿನಿಮಾಗಳ ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನು ತೆಲುಗಿನಲ್ಲಿ ಸಪ್ತಗಿರಿ ಅವರ ಸಿನಿಮಾ ಮೂಲಕ ತೆಲುಗಿಗೆ ಡೆಬ್ಯೂ ಆಗಿದ್ದೇನೆ. ಆ ಚಿತ್ರದ ಅರ್ಧ ಶೂಟಿಂಗ್ ಮುಗಿದಿದೆ. ಇವಿಷ್ಟು ನನ್ನ ಪ್ರಾಜೆಕ್ಟ್’ ಎಂದು ಮಾಹಿತಿ ನೀಡುತ್ತಾರೆ.