ವಿಜಯ್ ಅಭಿನಯದ ಬಹುನಿರೀಕ್ಷಿತ ಕೊನೆಯ ಚಿತ್ರ 'ಜನ ನಾಯಗನ್'
- ಜನ ನಾಯಗನ್ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್
- ಸುಳ್ಳು ಸುದ್ದಿ ಹರಡಿದ ವಿಜಯ್ ಫ್ಯಾನ್ ಪೇಜ್ನಿಂದ ಕ್ಷಮೆಯಾಚನೆ
Jana Nayagan: ತಮಿಳುನಾಡಿನ ಸಿಎಂ, ಕಾಲಿವುಡ್ನ ಸ್ಟಾರ್ ನಟ, ದಳಪತಿ ವಿಜಯ್ ಅಭಿನಯದ ಕೊನೆಯ ಬಹುನಿರೀಕ್ಷಿತ ಸಿನಿಮಾ 'ಜನನಾಯಗನ್' ರಿಲೀಸ್ಗೆ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂಬ ಫ್ಯಾನ್ ಪೇಜ್ ಪೋಸ್ಟ್ ಸದ್ಯ ಚಿತ್ರರಂಗದ ಅಂಗಳದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.
ಅಸಲಿಗೆ ವಿಜಯ್ ಚುನಾವಣೆಗೆ ನಿಲ್ಲುವ ಮೊದಲೇ ಸೆನ್ಸಾರ್ ಮಂಡಳಿ ಜನ ನಾಯಗನ್ ಚಿತ್ರದ ರಿಲೀಸ್ಗೆ ಸಂಕಷ್ಟ ತಂದಿಟ್ಟಿತು. ಈ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ ಎಂಬುದು ಗಮನಾರ್ಹ. ಕೋರ್ಟ್ ಮೆಟ್ಟಿಲೇರಿದ ಚಿತ್ರತಂಡಕ್ಕೆ ಅಂದುಕೊಂಡ ದಿನದಂದೇ ಬಿಡುಗಡೆ ಭಾಗ್ಯ ನೀಡದಂತೆ ಮಾಡಿದ್ದು ಸಿಬಿಎಫ್‌ಸಿ. ಜ.09ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಬೇಕಿದ್ದ ವಿಜಯ್ ಚಿತ್ರ, ಸಿಎಂ ಆದ ಮೇಲೂ ತೆರೆಗೆ ಬರದಿರುವುದು ನಟನ ಅಭಿಮಾನಿಗಳನ್ನು ಕೆರಳಿಸಿದೆ. ಮತ್ತೊಂದೆಡೆ, ಸೆನ್ಸಾರ್ ಮಂಡಳಿಯಿಂದ ಅಧಿಕೃತವಾಗಿ ಗ್ರೀನ್ ಸಿಗ್ನಲ್ ಸಿಗುವ ಮುನ್ನವೇ ವಿಜಯ್ ಫ್ಯಾನ್ ಪೇಜ್ವೊಂದು ಮಾಡಿದ ಎಡವಟ್ಟು ಕೆಲವರ ಪಿತ್ತವನ್ನು ನೆತ್ತಿಗೇರಿಸಿದೆ.
'ಜನ ನಾಯಗನ್' ಚಿತ್ರದ ನಕಲಿ ಸೆನ್ಸಾರ್ ಪ್ರಮಾಣಪತ್ರವನ್ನು ಹಂಚಿಕೊಂಡ ವಿಜಯ್ ಫ್ಯಾನ್ ಪೇಜ್, ಸಿಬಿಎಫ್‌ಸಿ ಚಿತ್ರದ ರಿಲೀಸ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಶೀಘ್ರವೇ ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾ ತೆರೆಗೆ ಅಪ್ಪಳಿಸಲಿದೆ ಎಂದು ಅಭಿಮಾನಿಗಳ ಪುಟದಲ್ಲಿ ಹಾಕಲಾದ ಪೋಸ್ಟ್ ದಳಪತಿಯ ಅಪ್ಪಟ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿತು. ಸೆನ್ಸಾರ್ ಮಂಡಳಿ ಚಿತ್ರಕ್ಕೆ 'ಎ' ಪ್ರಮಾಣಪತ್ರ ನೀಡಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ಟೀಕೆ, ಖಂಡನೆ ವ್ಯಕ್ತವಾಯಿತು. ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೆ ಜೋಕೇ ಎಂಬ ಎಚ್ಚರಿಕೆ ಬೆನ್ನಲ್ಲೇ ಫ್ಯಾನ್ ಪೇಜ್ ಬಹಿರಂಗವಾಗಿ ಕ್ಷಮೆ ಕೇಳಿ, ನಕಲಿ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ.
ಸಿನಿ ವರದಿಗಳ ಪ್ರಕಾರ, ಜನ ನಾಯಗನ್ ಇನ್ನೂ ಸಿಬಿಎಫ್‌ಸಿ ನೀಡಲಿರುವ ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಆಗಲಿ ಅಥವಾ ಚಿತ್ರದ ನಿರ್ದೇಶಕರೇ ಆಗಲಿ, ರಿಲೀಸ್ಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ರಿಲೀಸ್ ದಿನಾಂಕವನ್ನು ಘೋಷಿಸುತ್ತೇವೆ ಎಂದು ನಿರ್ಮಾಪಕ ವೆಂಕಟ್ ಕೆ. ನಾರಾಯಣ ಮೇ ತಿಂಗಳ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು,(ಏಜೆನ್ಸೀಸ್).