ನಟ ವಿಜಯ್ ಅಭಿನಯದ ಕೊನೆ ಸಿನಿಮಾ 'ಜನ ನಾಯಗನ್'
- ಬಹುನಿರೀಕ್ಷಿತ ತಮಿಳು ಸಿನಿಮಾ ಜನ ನಾಯಗನ್ ಜು.23ಕ್ಕೆ ತೆರೆಗೆ
- ದಳಪತಿ ವಿಜಯ್ ಅಭಿನಯದ ಕೊನೆ ಸಿನಿಮಾ ರಿಲೀಸ್ಗೆ ಫ್ಯಾನ್ಸ್ ಕಾತರ
- ಕಡೆಗೂ ಟೈಟಲ್ ಕಾರ್ಡ್ ಬದಲಾವಣೆಗೆ ಕೋರಿದ್ದ ಬೇಡಿಕೆ ಈಡೇರಿಕೆ
Jana Nayagan: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ, ಎಐಡಿಎಂಕೆಯಂತಹ ಘಟಾನುಘಟಿ ಪಕ್ಷಗಳನ್ನೇ ಮಣಿಸಿ, ರಾಜ್ಯದ 234 ಸ್ಥಾನಗಳಲ್ಲಿ 100ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದ ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಈಗ ತಮಿಳುನಾಡಿನ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿರುವುದು ಅವರ ಅಭಿಮಾನಿಗಳಲ್ಲಿ ಮತ್ತು ಚಿತ್ರರಂಗದ ಗಣ್ಯರಲ್ಲಿ ಭಾರಿ ಉತ್ಸಾಹ ತಂದಿದೆ. ಇದೇ ಸಮಯದಲ್ಲಿ ಬಹುದಿನಗಳಿಂದ ವೈಟಿಂಗ್ ಲಿಸ್ಟ್ನಲ್ಲಿದ್ದ 'ಜನ ನಾಯಗನ್' ರಿಲೀಸ್ ಸದ್ಯ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಲು ಸಜ್ಜಾಗಿದೆ.
ರಾಜ್ಯದ ಜನತೆ ಮತ್ತು ಅಭಿಮಾನಿಗಳಿಂದ ಅಭೂತಪೂರ್ವ ಬೆಂಬಲ ಪಡೆದ ವಿಜಯ್ ಈಗ ಬಹುದಿನಗಳಿಂದ ರಿಲೀಸ್ನಿಂದ ದೂರ ಉಳಿದಿದ್ದ ತಮ್ಮ ಬಹುನಿರೀಕ್ಷಿತ 'ಜನ ನಾಯಗನ್' ಮೂಲಕ ಸಿನಿಪ್ರಿಯರ ಎದುರು ಮಾಸ್ ಎಂಟ್ರಿಕೊಡಲು ಸಜ್ಜಾಗಿದ್ದಾರೆ. ಇದೇ ಜು.23ಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ತೆರೆ ಕಾಣಲಿರುವ ಚಿತ್ರಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಟೈಟಲ್ ಕಾರ್ಡ್ನಲ್ಲಿ ಕೇಳಿಕೊಂಡ ಮನವಿಯನ್ನು ಈಡೇರಿಸಿ ಎಂದು ನಿರ್ಮಾಣ ಸಂಸ್ಥೆಗೆ ಡಿಮಾಂಡ್ ಮಾಡಿದ್ದರು. ಅದೀಗ, ಕಡೆಗೂ ನೆರವೇರಿದೆ.
ಈ ವರ್ಷದ ಜ.09ರಂದೇ ತೆರೆಗೆ ಬರಬೇಕಿದ್ದ ವಿಜಯ್ ಚಿತ್ರಕ್ಕೆ ಸಾಕಷ್ಟು ಅಡಚಣೆಗಳು ಉಂಟಾಯಿತು. ಸೆನ್ಸಾರ್ ಮಂಡಳಿ ತಡೆಗೆ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿದ್ದ ತಡ, ಅಂದಿನಿಂದ ಇಂದಿನವರೆಗೂ ಚಿತ್ರದ ಬಗ್ಗೆ ಒಂದೇ ಒಂದು ಸುದ್ದಿಯೂ ಬಂದಿರಲಿಲ್ಲ. ಚುನಾವಣೆ ಇದ್ದ ಕಾರಣ, ತಾತ್ಕಾಲಿಕವಾಗಿ ಸಿನಿಮಾ ರಿಲೀಸ್ ಪದೇ ಪದೇ ಮುಂದೂಡಿಕೆ ಆಗಿತ್ತು. ಆದರೆ, ಇಂತಹ ದಿನ ಎಂದು ಅಧಿಕೃತವಾಗಿ ಚಿತ್ರತಂಡಕ್ಕೆ ನಿರ್ಧರಿಸಲು ಸಾಧ್ಯವಾಗಿರಲಿಲ್ಲ. ಕಾರಣ, ಸೆನ್ಸಾರ್ ಮಂಡಳಿ ತಂದಿಟ್ಟಿದ್ದ ಪಜೀತಿ. ಆದರೀಗ, ಆಗೋದೆಲ್ಲ ಒಳ್ಳೆಯದಕ್ಕೆ ಎನ್ನುವಂತೆ ವಿಜಯ್ ಗೆಲುವಿನ ಬಳಿಕವೇ ಸಿನಿಮಾ ತೆರೆಗೆ ಬರುತ್ತಿದ್ದು, ಫ್ಯಾನ್ಸ್ಗಳಲ್ಲಿ ನಟನ ಕ್ರೇಜ್ ಡಬಲ್ ಆಗಿದೆ.
ಅನೇಕ ವಿಜಯ್ ಅಭಿಮಾನಿಗಳು ಮತ್ತು ಬೆಂಬಲಿಗರು ರಿಲೀಸ್ಗೆ ಪ್ರತಿಕ್ರಿಯಿಸಿದ್ದು, ಸಿನಿಮಾದ ಟೈಟಲ್ ಕಾರ್ಡ್ನಲ್ಲಿ ಕೇವಲ ದಳಪತಿ ವಿಜಯ್ ಅಲ್ಲ, ಸಿಎಂ ದಳಪತಿ ವಿಜಯ್ ಎಂದು ಬದಲಿಸಿ. ಒಬ್ಬ ಲೀಡರ್ನನ್ನು ಘೋಷಿಸಿಲ್ಲ, ಜನರೇ ಅವರನ್ನು ತಮ್ಮ ನಾಯಕನಾಗಿ ಆಯ್ಕೆ ಮಾಡಿದ್ದಾರೆ ಎಂಬ ಹಲವು ಕಾಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ವಿಜಯ್ ಫ್ಯಾನ್ಸ್ ಆಗ್ರಹಕ್ಕೆ ಅಸ್ತು ಎಂದಿರುವ ನಿರ್ದೇಶಕರು ಮತ್ತು ನಿರ್ಮಾಪಕರು, ಇದೀಗ ಟೈಟಲ್ ಕಾರ್ಡ್ನಲ್ಲಿ ಕೇವಲ ಸಿಎಂ ದಳಪತಿ ವಿಜಯ್ ಬದಲಿಗೆ ಸನ್ಮಾನ್ಯ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಎಂದು ಹಾಕಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬಾಕ್ಸ್ಆಫೀಸ್ ದಾಖಲೆಗಳು ಉಡೀಸ್?
ಇದು ವಿಜಯ್ ನಟನೆಯ ಕೊನೆಯ ಸಿನಿಮಾ ಆಗಿರುವುದರಿಂದ ಬಾಕ್ಸ್ ಆಫೀಸ್ ದಾಖಲೆಗಳು ಉಡೀಸ್ ಆಗುವ ನಿರೀಕ್ಷೆಗಳು ಹೆಚ್ಚಿವೆ. ವಿಜಯ್ ಅಭಿನಯದ ಹಿಂದಿನ ಸಿನಿಮಾಗಳಾದ ಗೋಟ್, ಬೀಸ್ಟ್, ಮಾಸ್ಟರ್ ರೆಕಾರ್ಡ್ಗಳನ್ನು ಬ್ರೇಕ್ ಮಾಡಲಿದೆ ಎಂಬ ಮಾತುಗಳು ಕಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತಿದೆ. ಮತ್ತೊಂದೆಡೆ, ವಿಜಯ್ ಸಿಎಂ ಆದಮೇಲೆ ಭಾರಿ ಕ್ರೇಜ್ ಇರುವ ಹಿನ್ನೆಲೆ ಸಿನಿಮಾ ಮೊದಲ ದಿನವೇ ಜಾಗತಿಕವಾಗಿ 1000 ಕೋಟಿ ಕ್ಲಬ್ ಸೇರಬಹುದು ಎಂಬ ನಿರೀಕ್ಷೆಗಳಿವೆ. ಒಟ್ಟಾರೆ, ಸಿನಿಮಾ ಹೇಗಿರಲಿದೆ? ಹೇಗೆ ಮೂಡಿಬರಲಿದೆ, ಯಾವೆಲ್ಲ ದಾಖಲೆಗಳು ಬ್ರೇಕ್ ಆಗಲಿವೆ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).