ತಮಿಳುನಾಡು ಸಿಎಂ, ನಟ ವಿಜಯ್ ಅಭಿನಯದ ಕೊನೆ ಸಿನಿಮಾ 'ಜನ ನಾಯಗನ್'
- ಬಹುನಿರೀಕ್ಷಿತ ಜನ ನಾಯಗನ್ ರಿಲೀಸ್ಗೆ ಸಕಲ ಸಿದ್ಧತೆಗಳು
- ರಿಲೀಸ್ಗೆ ಪರದಾಡುತ್ತಿದ್ದ ಚಿತ್ರದ ಬಿಡುಗಡೆಗೆ ಶೀಘ್ರವೇ ಮಹೂರ್ತ
- ಸಿನಿಮಾದ ಟೈಟಲ್ ಕಾರ್ಡ್ನಲ್ಲಿ ವಿಜಯ್ ಹೆಸರು ಬದಲಾವಣೆಗೆ ದಳಪತಿ ಫ್ಯಾನ್ಸ್ ಪಟ್ಟು
Jana Nayagan: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ, ಎಐಡಿಎಂಕೆಯಂತಹ ಘಟಾನುಘಟಿ ಪಕ್ಷಗಳನ್ನೇ ಮಣಿಸಿ, ರಾಜ್ಯದ 234 ಸ್ಥಾನಗಳಲ್ಲಿ 100ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದ ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ಪ್ರಸ್ತುತ ತಮಿಳುನಾಡಿನ ಸಿಎಂ ವಿಜಯ್ಗೆ ಸದ್ಯ ದೇಶವ್ಯಾಪಿ ಅಭಿಮಾನಿಗಳ ಶುಭಹಾರೈಕೆಗಳು ಜೋರಾಗಿವೆ. ಮತ್ತೊಂದೆಡೆ, ಅವರ ನಟನೆಯ ಬಹುನಿರೀಕ್ಷಿತ 'ಜನ ನಾಯಗನ್' ರಿಲೀಸ್ಗೆ ಶೀಘ್ರವೇ ಅಧಿಕೃತ ಮಹೂರ್ತ ಫಿಕ್ಸ್ ಆಗಲಿದ್ದು, ಈ ಬಾರಿ ಯಾವುದೇ ಬದಲಾವಣೆ ಅಥವಾ ಮುಂದೂಡಿಕೆ ಇರುವುದಿಲ್ಲ ಎಂಬುದಂತು ಖಚಿತವಾಗಿದೆ.
ತನ್ನ ಚೊಚ್ಚಲ ರಾಜಕೀಯ ಪ್ರವೇಶದಲ್ಲಿಯೇ ತಮಿಳುನಾಡಿನ ಜನತೆಯಿಂದ ಅಭೂತಪೂರ್ವ ಬೆಂಬಲ ಪಡೆದ ವಿಜಯ್ಗೆ ಇಂದಿಗೂ ಗಣ್ಯರು, ಚಿತ್ರರಂಗದ ಕಲಾವಿದರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಸಿಎಂ ಆಗಿ ತಮಿಳುನಾಡಿನಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತಂದಿರುವ ವಿಜಯ್, ತಾನೂ ಕೂಡ ಜನಸಾಮಾನ್ಯರಲ್ಲಿ ಒಬ್ಬ ಎಂಬಂತೆ ಸರಳವಾಗಿ ಬಸ್ ಪ್ರಯಾಣ, ತಮ್ಮ ಕಾರನ್ನು ತಾವೇ ಚಲಾಯಿಸುವ ಮೂಲಕ ರಾಜ್ಯದ ಜನತೆಯ ಹೃದಯವನ್ನು ಗೆಲ್ಲುತ್ತಿದ್ದಾರೆ. ಈಗ ಅವರ ಸಿನಿಮಾ ಬಿಡುಗಡೆಗೆ ನಿರೀಕ್ಷೆಗಳು ದುಪ್ಪಟ್ಟಾಗಿದ್ದು, ಫ್ಯಾನ್ಸ್ ಟೈಟಲ್ ಕಾರ್ಡ್ನಲ್ಲಿ ಬದಲಾವಣೆಗೆ ಆಗ್ರಹಿಸಿರುವುದು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಈ ವರ್ಷದ ಜ.09ರಂದೇ ತೆರೆಗೆ ಬರಬೇಕಿದ್ದ ವಿಜಯ್ ಚಿತ್ರಕ್ಕೆ ಆರಂಭದಲ್ಲಿ ಸಾಕಷ್ಟು ಅಡಚಣೆಗಳು ಉಂಟಾಯಿತು. ಸೆನ್ಸಾರ್ ಮಂಡಳಿ ತಡೆಗೆ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿದ್ದ ತಡ, ಅಂದಿನಿಂದ ಇಂದಿನವರೆಗೂ ಚಿತ್ರದ ಬಗ್ಗೆ ಒಂದೇ ಒಂದು ಸುದ್ದಿಯೂ ಇರಲಿಲ್ಲ. ಚುನಾವಣೆ ಇದ್ದ ಕಾರಣ, ತಾತ್ಕಾಲಿಕವಾಗಿ ಸಿನಿಮಾ ರಿಲೀಸ್ ಮುಂದೂಡಿಕೆ ಆಗಿತ್ತು. ಆದರೆ, ಇಂತಹ ದಿನ ಎಂದು ಅಧಿಕೃತವಾಗಿ ಚಿತ್ರತಂಡಕ್ಕೆ ನಿರ್ಧರಿಸಲು ಸಾಧ್ಯವಾಗಿರಲಿಲ್ಲ. ಕಾರಣ, ಸೆನ್ಸಾರ್ ಮಂಡಳಿ ತಂದಿಟ್ಟಿದ್ದ ಪಜೀತಿ. ಆದರೀಗ, ಆಗೋದೆಲ್ಲ ಒಳ್ಳೆಯದಕ್ಕೆ ಎನ್ನುವಂತೆ ವಿಜಯ್ ಸಿಎಂ ಆದ ಬಳಿಕವೇ ಸಿನಿಮಾ ತೆರೆಗೆ ಬರುತ್ತಿರುವುದು, ಫ್ಯಾನ್ಸ್ಗಳಲ್ಲಿ ನಟನ ಕ್ರೇಜ್ ಡಬಲ್ ಆಗಿದೆ ಮತ್ತು ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ.
ಅನೇಕ ವಿಜಯ್ ಅಭಿಮಾನಿಗಳು ಮತ್ತು ಬೆಂಬಲಿಗರು ರಿಲೀಸ್ಗೆ ಪ್ರತಿಕ್ರಿಯಿಸಿದ್ದು, ಸಿನಿಮಾದ ಟೈಟಲ್ ಕಾರ್ಡ್ನಲ್ಲಿ ದಳಪತಿ ವಿಜಯ್ ಅಲ್ಲ, ಸಿಎಂ ದಳಪತಿ ವಿಜಯ್ ಎಂದು ಬದಲಿಸಿ. ಒಬ್ಬ ಲೀಡರ್ನನ್ನು ಘೋಷಿಸಿಲ್ಲ, ಜನರೇ ಅವರನ್ನು ಆಯ್ಕೆ ತಮ್ಮ ನಾಯಕನಾಗಿ ಆಯ್ಕೆ ಮಾಡಿದ್ದಾರೆ ಎಂಬ ಹಲವು ಕಾಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿವೆ. ಅಭಿಮಾನಿಗಳ ಆಗ್ರಹಕ್ಕೆ ಜನ ನಾಯಗನ್ ನಿರ್ದೇಶಕರು ಮತ್ತು ನಿರ್ಮಾಪಕರು ಟೈಟಲ್ ಕಾರ್ಡ್ನಲ್ಲಿ ಹೆಸರು ಬದಲಿಸುತ್ತಾರೋ ಅಥವಾ ಎಂದಿನಂತೆ ದಳಪತಿ ವಿಜಯ್ ಎಂದೇ ಹಾಕ್ತಾರೋ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.
ಕೆವಿಎನ್ ಸಂಸ್ಥೆ ಹೇಳಿಕೆ
'ಜನ ನಾಯಗನ್' ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್, ಇತ್ತೀಚೆಗಷ್ಟೇ ಸಿನಿಮಾ ರಿಲೀಸ್ಗೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೆಟ್ ನೀಡಿದ ಎಂಬ ನಕಲಿ ಪೋಸ್ಟ್ ಬಗ್ಗೆ ಸ್ಪಷ್ಟನೆ ಕೊಟ್ಟಿದೆ. ಚಿತ್ರಕ್ಕೆ ಇನ್ನೂ ಪ್ರಮಾಣೀಕರಣ ದೊರೆತಿಲ್ಲ. ಸಿಬಿಎಫ್‌ಸಿ ತನ್ನ ಇತ್ತೀಚಿನ ಬದಲಾವಣೆಗಳನ್ನು ಪೂರ್ಣಗೊಳಿಸಿದೆ. ಅಂತಿಮ ಬದಲಾವಣೆಗಳಾದ ತಕ್ಷಣ ಗ್ರೀನ್ ಸಿಗ್ನಲ್ ಕೊಡಲಿದೆ ಎಂದು ಬಹಿರಂಗಪಡಿಸಿದೆ,(ಏಜೆನ್ಸೀಸ್).