ನಟ ವಿಜಯ್ (ಎಡ), ನಿರ್ದೇಶಕ ಎಚ್. ವಿನೋತ್
- ಜುಲೈ 23ರಂದು ತಮಿಳು ನಟ ವಿಜಯ್ ಅಭಿನಯದ ಕೊನೇ ಸಿನಿಮಾ ರಿಲೀಸ್
- ವಿಜಯ್ ಚಿತ್ರದ ರಿಲೀಸ್ ಹಿನ್ನಲೆ ನಿರ್ದೇಶಕ ಎಚ್. ವಿನೋತ್ ಸಂತಸದ ಹೇಳಿಕೆ
Jana Nayagan: ಸೆನ್ಸಾರ್ ಮಂಡಳಿ ತಂದಿಟ್ಟ ಸಮಸ್ಯೆಯಿಂದ ಹಲವಾರು ಬಾರಿ ಮುಂದೂಡಿಕೆ, ಕಾನೂನು ಸಂಕಷ್ಟಕ್ಕೆ ಸಿಲುಕಿದ್ದ ತಮಿಳುನಾಡಿನ ಸಿಎಂ, ದಳಪತಿ ವಿಜಯ್ ಅಭಿನಯದ ಕೊನೇ ಹಾಗೂ ಬಹುನಿರೀಕ್ಷಿತ 'ಜನ ನಾಯಗನ್' ಚಿತ್ರವು ಇದೇ ಜುಲೈ 23ರಂದು ದೇಶವ್ಯಾಪಿ ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಅದ್ಧೂರಿಯಾಗಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಮೊದಲ ದಿನವೇ ಹಲವು ದಾಖಲೆಗಳನ್ನು ಉಡೀಸ್ ಮಾಡಲು ತೆರೆಗೆ ಅಪ್ಪಳಿಸುತ್ತಿರುವ ಚಿತ್ರದ ಬಗ್ಗೆ ನಿರ್ದೇಶಕ ಎಚ್. ವಿನೋತ್ ಕೆಲವು ಕುತೂಹಲಕಾರಿ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಸಿಎಂ ಆದ ಮೇಲೆ ವಿಜಯ್ ಅವರ ಸಿನಿಮಾ ತೆರೆಗೆ ಬರುತ್ತಿರುವುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳ ಚಿತ್ರಮಂದಿರಗಳ ಮೊದಲ ದಿನದ ಟಿಕೆಟ್ಗಳು ಫುಲ್ ಸೋಲ್ಡ್ ಔಟ್ ಆಗಿವೆ. ಇದೇ ಖುಷಿಯಲ್ಲಿ ಹಲವು ಸಂದರ್ಶನಗಳಲ್ಲಿ ಚಿತ್ರಕ್ಕೆ ಸಂಬಂಧಿಸಿದಂತೆ ಓಪನ್ ಆಗಿ ಮಾತನಾಡುತ್ತಿರುವ ನಿರ್ದೇಶಕರು, ನಾಯಕ ನಟನಿಲ್ಲದೇ ಚಿತ್ರ ಪ್ರಚಾರ ಕಾರ್ಯಗಳನ್ನು ಬಿರುಸಿನಿಂದ ಮಾಡುತ್ತಿದ್ದಾರೆ.
ನಮ್ಮ ಸಿನಿಮಾಗೆ ಸೆನ್ಸಾರ್ ಮಂಡಳಿ ಸಮಸ್ಯೆಗಳಿಂದ ರಿಲೀಸ್ ವಿಳಂಬವಾಯಿತು. ಈ ವರ್ಷದ ಆರಂಭದಲ್ಲೇ ಚಿತ್ರ ಬಿಡುಗಡೆಯಾಗಲು ಸಿದ್ಧವಿತ್ತು. ಆದ್ರೆ, ಸಾಕಷ್ಟು ಬಾರಿ ಮುಂದೂಡಿಕೆಯಾಯಿತು. ಇದರ ನಡುವೆಯೇ, ಚಿತ್ರದ ಬಹುಮುಖ್ಯ ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಯಿತು. ಇದು ನನ್ನ ಮನಸ್ಸಿಗೆ ತುಂಬಾ ನೋವುಂಟು ಮಾಡಿತು. ಪೈರಸಿಯನ್ನು ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ ಅನ್ನೋ ಸಂಗತಿ ಬೇಸರ ತಂದೊಡ್ಡಿತು ಎಂದರು.
ಈ ವಿಷಯ ವಿಜಯ್ ಸರ್ಗೆ ಹೇಳಿದಾಗ, ಅವರು ನನ್ನ ಬೆನ್ನಿಗೆ ನಿಂತರು. ಫೋನ್ನಲ್ಲಿ ಮಾತನಾಡಿ, ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ತುಂಬಾ ತಲೆಕೆಡಿಸಿಕೊಳ್ಳಬೇಡಿ. ನಾವೆಲ್ಲರೂ ಸೇರಿ ಸಮಸ್ಯೆಯನ್ನು ಬಗೆಹರಿಸೋಣ ಎಂದು ಧೈರ್ಯ ತುಂಬಿದರು ಎಂದರು. ಇದೇ ಸಮಯದಲ್ಲಿ ನಿಮ್ಮ ಚಿತ್ರವು ತೆಲುಗಿನ ಭಗವಂತ ಕೇಸರಿ ಸಿನಿಮಾ ರಿಮೇಕ್ ಅಲ್ಲವೇ ಎಂಬ ಪ್ರಶ್ನೆಗೆ ವಿನೋತ್ ಹೌದು ಎಂದೇ ಉತ್ತರಿಸಿದ್ದಾರೆ.
ತೆಲುಗು ಹಿಟ್ ಅನ್ನು ರಿಮೇಕ್ ಮಾಡುವುದು ಸುಲಭದ ನಿರ್ಧಾರವಾಗಿರಲಿಲ್ಲ. ಅಜಿತ್ ಸರ್ ಜೊತೆಗಿನ 'ಪಿಂಕ್' ರೀಮೇಕ್ 'ನೇಕೊಂಡ ಪಾರ್ವೈ' ಬಳಿಕ ನನ್ನ ಕರಿಯರ್ಗೆ ಪ್ಲಸ್ ಆಯಿತು. ಮತ್ತು ನಾನು ಮತ್ತೊಂದು ರೀಮೇಕ್ ಮಾಡುವುದು ಬೇಡವೆಂದು ಸುಮ್ಮನಿದ್ದೆ. ಅದೇ ಸಮಯದಲ್ಲಿ, ವಿಜಯ್ ಸರ್ ಜೊತೆ ಕೆಲಸ ಮಾಡುವ ಅವಕಾಶವನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲ. ಅದರಲ್ಲೂ ವಿಶೇಷವಾಗಿ ಅವರ ಕೊನೆಯ ಚಿತ್ರ. ಹೀಗಾಗಿ, ಸಾಕಷ್ಟು ಬದಲಾವಣೆಗಳೊಂದಿಗೆ ಸಿನಿಮಾವನ್ನು ಮಾಡಿದ್ದೇವೆ ಎಂದು ವಿವರಿಸಿದರು.
ಇದೇ ವಿಜಯ್ ಅವರ ಕೊನೆ ಸಿನಿಮಾವಲ್ಲ. ಬದಲಿಗೆ ಇದು ಸಿಎಂ ವಿಜಯ್ ಅವರ ಮೊದಲನೇ ಚಿತ್ರ ಎಂದು ಹೇಳಿದರು. ಈ ಮೂಲಕ ಅವರ ಇನ್ನೂ ಒಂದಷ್ಟು ಸಿನಿಮಾಗಳನ್ನು ಮಾಡಬಹುದು ಎಂಬ ಹಿಂಟ್ ನೀಡಿದರು. ಆದ್ರೆ, ಸಿನಿಪ್ರಿಯರಿಗೆ ಮತ್ತು ಅಭಿಮಾನಿಗಳಿಗೆ ಈಗಾಗಲೇ ಗೊತ್ತಿರುವಂತೆ, ತಮ್ಮ ಮುಂದಿನ ದಿನಗಳನ್ನು ಸಂಪೂರ್ಣವಾಗಿ ರಾಜಕೀಯ, ಜನ ಸೇವೆಗೆ ಮೀಸಲಿಟ್ಟಿರುವ ವಿಜಯ್, ಜನ ನಾಯಗನ್ ಯಶಸ್ಸಿನ ಬಳಿಕ ಕಾಲಿವುಡ್ಗೆ ಗುಡ್ಬೈ ಹೇಳುವುದು ಖಚಿತ,(ಏಜೆನ್ಸೀಸ್).