ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಮೇಲೆ ಅವರ ಕಟ್ಟಾಭಿಮಾನಿಗಳಿಗೆ ಇರುವ ಅಭಿಮಾನ, ಪ್ರೀತಿ, ಅಕ್ಕರೆ ಅಷ್ಟಿಷ್ಟಲ್ಲ. ಅಪ್ಪು ನಿಧನರಾದಾಗಿನಿಂದ ಇಂದಿನವೆರೆಗೆ ಅಭಿಮಾನಿಗಳು ಅವರ ಅಭಿಮಾನವನ್ನು, ಹುಚ್ಚು ಪ್ರೀತಿಯನ್ನು ಸಾಧ್ಯವಾದ ಎಲ್ಲಾ ರೀತಿಯಲ್ಲಿ ತೋರಿಸುತ್ತಲೇ ಬಂದಿದ್ದಾರೆ. ಇನ್ನು, ಮಾರ್ಚ್ 17ಕ್ಕೆ ಅಪ್ಪು ಅವರು ಹೀರೋ ಆಗಿ ಅಭಿನಯಿಸಿರುವ ಕೊನೆಯ ಸಿನಿಮಾ ‘ಜೇಮ್ಸ್’ ರಿಲೀಸ್ ಆಗಲಿದ್ದು, ಪುನೀತ್ ಅಭಿಮಾನಿಗಳು ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಕೊನೆಯ ಬಾರಿ ಈ ಸಿನಿಮಾದ ಮೂಲಕ ಅಪ್ಪು ಅವರನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಹಾಗೂ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಲು ಫ್ಯಾನ್ಸ್ಗಳು ಕಾದು ಕುತಿದ್ದಾರೆ.
ಹೀಗಾಗಿ, ಸಿನಿಮಾ ರಿಲೀಸ್ ಆಗುವ 6 ದಿನಗಳ ಮುಂದೆಯೇ ಚಿತ್ರಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್ ಅವಕಾಶವನ್ನು ‘ಜೇಮ್ಸ್’ ಚಿತ್ರತಂಡ ನೀಡಿತ್ತು. ‘ಜೇಮ್ಸ್’ ತೆರೆಕಾಣುವುದಕ್ಕೂ ಒಂದು ವಾರ ಮೊದಲೇ ಸಿನಿಮಾದ ಪ್ರೀ-ಬುಕಿಂಗ್ ಆರಂಭಗೊಂಡಿದ್ದು, 'ಬುಕ್ ಮೈ ಶೋ' ಆ್ಯಪ್ ಮೂಲಕ ಆನ್ಲೈನ್ನಲ್ಲಿ ಟಿಕೆಟ್ಗಳನ್ನು ಮಾರಾಟ ಮಾಡಲಾಗುತ್ತಿದೆ. ಇನ್ನು, ಅಂದು ಮುಂಜಾನೆ 6 ಗಂಟೆಗೆ ‘ಜೇಮ್ಸ್’ನ ವಿಶೇಷ ಶೋ ಏರ್ಪಡಿಸಲಾಗಿದ್ದು, ಆ ಸಮಯದಲ್ಲಿ ಅಪ್ಪು ಅವರನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ ಎಂದರೇ ತಪ್ಪಾಗುವುದಿಲ್ಲ.
6 ಗಂಟೆಗೆ ಶೋಗೆ ಬೇಡಿಕೆ ಹೆಚ್ಚಾಗಿದ್ದು, ಪರಿಣಾಮ ಅನೇಕ ಥಿಯೇಟರ್ಗಳಲ್ಲಿ 6 ಗಂಟೆ ಶೋಗಳಿಗೆ ಈಗಾಗಲೇ ಟಿಕೆಟ್ಗಳು ಸೋಲ್ಡ್ಔಟ್ ಆಗಿವೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ 6 ಗಂಟೆಗೆ 200ಕ್ಕೂ ಹೆಚ್ಚು ಶೋಗಳ ಟಿಕೆಟ್ಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಇದರಲ್ಲಿ ಅನೇಕ ಶೋಗಳ ಟಿಕೆಟ್ಗಳು ಸೋಲ್ಡ್ಔಟ್ ಆಗಿದೆ ಎಂದು ಆ್ಯಪ್ನಲ್ಲಿ ಗೊತ್ತಾಗುತ್ತಿದೆ. ಉಳಿದ ಕೆಲ ಥಿಯೇಟರ್ಗಳಲ್ಲಿ ಶೋಗಳ ಟಿಕೆಟ್ಗಳು ಫಿಲ್ಲಿಂಗ್ ಫಾಸ್ಟ್ ಎಂದು ತೋರಿಸುತ್ತಿದೆ. ಕರ್ನಾಟಕದಾದ್ಯಂತ ಶೇ.80 ಚಿತ್ರಮಂದಿರಗಳಲ್ಲಿ 'ಜೇಮ್ಸ್' ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಇದರಿಂದ ಈ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡುವ ಸೂಚನೆ ಕಾಣುತ್ತಿದೆ.