ಜಗದ್ಧಾತ್ರಿ ತಂಡ 
ಸಿನಿವಾಣಿ

ಜೀ ಕನ್ನಡದಲ್ಲಿ ‘ಜಗದ್ಧಾತ್ರಿ’ ಧಾರಾವಾಹಿ ಆರಂಭ : ಕಿರುತೆರೆಗೆ ಮರಳಿದ ಮೋಕ್ಷಿತಾ, ವಿಜಯ್ ಸೂರ್ಯ, ಕವಿತಾ ಗೌಡ

ಅಂಡರ್‌ಕವರ್ ಮಹಿಳಾ ಪೊಲೀಸ್ ಕಥೆಯುಳ್ಳ ‘ಜಗದ್ಧಾತ್ರಿ’ ಧಾರಾವಾಹಿ ಇಂದಿನಿಂದ (ಸೆ.28) ಆರಂಭವಾಗಲಿದ್ದು, ಸೋಮವಾರದಿಂದ- ಶುಕ್ರರವಾರದವರೆಗೆ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

ಬೆಂಗಳೂರು: ಸದಭಿರುಚಿ ಧಾರಾವಾಹಿಗಳ ಮೂಲಕ ಗುರುತಿಸಿಕೊಂಡಿರುವ ಜೀ ಕನ್ನಡ ವಾಹಿನಿ ಇದೀಗ ಮತ್ತೊಂದು ಹೊಸ ಅಲೆಯ ಕಥೆ ಹೇಳಲು ಸಜ್ಜಾಗಿದೆ. ಅಂಡರ್‌ಕವರ್ ಮಹಿಳಾ ಪೊಲೀಸ್ ಕಥೆಯುಳ್ಳ ‘ಜಗದ್ಧಾತ್ರಿ’ ಧಾರಾವಾಹಿ ಇಂದಿನಿಂದ (ಸೆ.28) ಆರಂಭವಾಗಲಿದ್ದು, ಸೋಮವಾರದಿಂದ- ಶುಕ್ರರವಾರದವರೆಗೆ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಮನೆ ಹೊರಗಡೆ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುವ ‘ಜಗದ್ಧಾತ್ರಿ’, ಅಪ್ಪಟ ದೇಶಭಕ್ತೆಯಾಗಿದ್ದ ಅಮ್ಮನ ಮೇಲೆ ದ್ರೇಶದ್ರೋಹ ಆರೋಪವನ್ನು ತೊಡೆದು ಹಾಕಲು ಏನೆಲ್ಲಾ ಸಾಹಸ ಮಾಡುತ್ತಾಳೆ ಎಂಬುದರ ಮೇಲೆ ಕಥೆ ಸುತ್ತಲಿದೆ. ನಟಿ ಮೋಕ್ಷಿತಾ ಪೈ, ವಿಜಯ್ ಲಲಿತಾ ಸೂರ್ಯ, ಕವಿತಾ ಗೌಡ ಮುಖ್ಯಭೂಮಿಕೆಯಲ್ಲಿದ್ದಾರೆ. ಮೋಕ್ಷಿತಾ ಹಾಗೂ ವಿಜಯ್ ಸೂರ್ಯ ಐಪಿಎಸ್ ಅಧಿಕಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಗಿರಿಜಾ ಲೋಕೇಶ್, ಅರುಣಾ ಬಾಲರಾಜ್, ಲಕ್ಷ್ಮೀ ಸಿದ್ದಯ್ಯ, ಮೈಕೋ ಮಂಜು, ವಚನ್ ಹೊಸಮಠ, ರವಿ ಭಟ್, ಸೋನಿಯಾ ಪೊನ್ನಮ್ಮ ಹಾಗೂ ಮಾನಸಿ ಸುಧೀರ್ ತಾರಾಗಣದಲ್ಲಿದ್ದಾರೆ. ಮಹೇಶ್‌ರಾವ್ ಹಾಗೂ ಪ್ರಕಾಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿಗೆ ಮಹೇಶ್ ಸಾರಂಗ್ ನಿರ್ದೇಶನವಿರಲಿದೆ. ಜೀ ಕನ್ನಡ ಬಿಜಿನೆಸ್ ಹೆಡ್ ದೀಪಕ್ ಶ್ರೀರಾಮಲು ಮಾತನಾಡಿ, ‘ಪ್ರತಿ ಮನೆಯಲ್ಲೂ ಹೆಣ್ಣು ಮಕ್ಕಳು ವಿಭಿನ್ನ ಥರದ ಸವಾಲುಗಳ ಮಧ್ಯೆ ಬದುಕು ನಡೆಸುತ್ತಿದ್ದಾರೆ. ಹಾಗೆಯೇ, ‘ಜಗದ್ಧಾತ್ರಿ’ ಮನೆಯಲ್ಲೂ ವಿಭಿನ್ನ ಸವಾಲುಗಳಿವೆ. ಅದೆಲ್ಲವನ್ನೂ ಮೀರಿ ಆಕೆ ಪೊಲೀಸ್ ಆಗಿ, ಸಮಾಜ ಕಾಯುವ ಕೆಲಸ ಮಾಡುತ್ತಾಳೆ. ಅವರವರ ಸವಾಲುಗಳನ್ನ ಹಲವು ರೀತಿಯ ಕಥಾಹಂದರ ಕಟ್ಟಿ ಕನ್ನಡಿಗರಿಗೆ ತಲುಪಿಸುವುದೇ ನಮ್ಮ ಉದ್ದೇಶ. ಈ ಕಥೆಯೂ ನೋಡುಗರಿಗೆ ಹೊಸ ಅನುಭವದ ಜತೆಗೆ ಮನರಂಜನೆ ನೀಡುತ್ತದೆ’ ಎಂದು ಹೇಳಿದರು.