ಸಿನಿವಾಣಿ

ಸುಕೇಶ್ ನನ್ನ ಬದುಕು ನರಕ ಮಾಡಿದ: ದೂರು ದಾಖಲಿಸಿದ ನಟಿ ಜಾಕ್​ಲೀನ್ ಫರ್ನಾಂಡಿಸ್

ಮುಂಬೈ: 200 ಕೋಟಿ ರೂ. ವಂಚನೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ವಿರುದ್ಧ ನಟಿ ಜಾಕ್​ಲೀನ್ ಫರ್ನಾಂಡಿಸ್ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್​ನಲ್ಲಿ ಹೇಳಿಕೆ ದಾಖಲಿಸಿದ್ದಾರೆ.

ಸುಕೇಶ್​ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಉಡುಗೊರೆ ಪಡೆದಿರುವ ಆರೋಪ ಜಾಕ್​ಲೀನ್ ಮೇಲಿದೆ. ಈ ಹಿನ್ನೆಲೆಯಲ್ಲಿ ಹೇಳಿಕೆ ದಾಖಲಿಸಿರುವ ಜಾಕ್​ಲೀನ್, ‘ಮಾಜಿ ತಮಿಳುನಾಡು ಸಿಎಂ ಜಯಲಲಿತಾ ಸಂಬಂಧಿ ಎಂದು ಸುಕೇಶ್​ನನ್ನು ಪಿಂಕಿ ಇರಾನಿ ನನಗೆ ಪರಿಚಯ ಮಾಡಿಕೊಟ್ಟಿದ್ದರು. ಆದರೆ, ಆತನ ಅಪರಾಧ ಹಿನ್ನೆಲೆಯ ಬಗ್ಗೆ ಹೇಳಿರಲಿಲ್ಲ. ಸುಕೇಶ್, ನಾನು ನಿಮ್ಮ ದೊಡ್ಡ ಅಭಿಮಾನಿ. ದಕ್ಷಿಣದಲ್ಲೂ ನೀವು ನಟಿಸಬೇಕು. ನಾನು ಸಿನಿಮಾಗಳನ್ನು ನಿರ್ವಿುಸುತ್ತಿದ್ದೇನೆ, ಒಟ್ಟಿಗೆ ಕೆಲಸ ಮಾಡೋಣ ಎಂದು ದಾರಿ ತಪ್ಪಿಸಿ, ನನ್ನ ಜೀವನ, ಕರಿಯರ್ ಹಾಳು ಮಾಡಿದ’ ಎಂದಿದ್ದಾರೆ.

‘ಆತನ ಬಂಧನವಾದ ಬಳಿಕವಷ್ಟೇ ಸುಕೇಶ್ ಅಪರಾಧ ಹಿನ್ನೆಲೆಯ ಬಗ್ಗೆ ಗೊತ್ತಾಯಿತು’ ಎಂದು ಅವರು ಹೇಳಿಕೊಂಡಿದ್ದಾರೆ. ಜತೆಗೆ ಒಮ್ಮೆ ಕೇರಳದಲ್ಲಿರುವಾಗ ಜಾಕ್​ಲೀನ್ ಪ್ರಯಾಣಕ್ಕಾಗಿ ಸುಕೇಶ್ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದನಂತೆ. ಎರಡು ಬಾರಿ ಆತನನ್ನು ಚೆನ್ನೈನಲ್ಲಿ ಭೇಟಿಯಾದಾಗ ಪ್ರೖೆವೇಟ್ ಜೆಟ್ ವ್ಯವಸ್ಥೆ ಮಾಡಿಸಿದ್ದ ಎಂದು ಜಾಕ್​ಲೀನ್ ಹೇಳಿಕೊಂಡಿದ್ದಾರೆ. -ಏಜೆನ್ಸೀಸ್