Deepika Padukone : ಸದ್ಯ ಬಾಲಿವುಡ್ ಸಿನಿಮಾ ರಂಗದ ನಂಬರ್ 1 ಸ್ಟಾರ್ ನಟಿ ಯಾರೆಂದು ಪ್ರಶ್ನಿಸಿದರೆ, ಬಹುತೇಕ ಮಂದಿ ದೀಪಿಕಾ ಪಡುಕೋಣೆ ಹೆಸರೇಳುತ್ತಾರೆ. ಪಠಾಣ್, ಜವಾನ್, ಫೈಟರ್ ಹಾಗೂ ಕಲ್ಕಿ ಸಿನಿಮಾಗಳ ಮೂಲಕ ಸಾಲು ಸಾಲು ಹಿಟ್ ನೀಡಿರುವ ಡಿಪ್ಪಿ, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.
ಸ್ಟಾರ್ ಕಲಾವಿದರು ಅಂದರೆ, ಅವರಿಗೆ ಸಾಕಷ್ಟು ಅಭಿಮಾನಿ ಬಳಗವಿರುತ್ತದೆ. ಅವರು ಎಲ್ಲೇ ಹೋದರು ಜನರು ಮುತ್ತಿಕೊಳ್ಳುತ್ತಾರೆ. ಅಲ್ಲದೆ, ಗುಂಪು ಸೇರಿದಾಗ ಅಪಾಯದ ಸಾಧ್ಯತೆಯೂ ಇರುತ್ತದೆ. ಇಂತಹ ಸಂದರ್ಭದಲ್ಲಿ ಕಲಾವಿದರ ರಕ್ಷಣೆ ಮಾಡುವುದು ಅವರ ಅಂಗರಕ್ಷಕರು. ಪ್ರತಿಯೊಬ್ಬ ಸ್ಟಾರ್ ನಟ-ನಟಿಯರು ತಮಗೊಬ್ಬ ಅಂಗರಕ್ಷಕನನ್ನು ನೇಮಿಸಿಕೊಂಡಿರುತ್ತಾರೆ. ಅದೇ ರೀತಿ ಜಲಾಲುದ್ದೀನ್ ಶೇಖ್ ಎಂಬುವರು ದೀಪಿಕಾ ಪಡುಕೋಣೆ ಅವರ ಅಂಗರಕ್ಷಕ.
ದೀಪಿಕಾ ಅವರು ಎಲ್ಲಿಗೆ ಹೋದರೂ ಜಲಾಲುದ್ದೀನ್ ಮತ್ತು ಅವರ ತಂಡವು ಆ ಡಿಪ್ಪಿ ಜೊತೆಗಿರುತ್ತದೆ. ಶೂಟಿಂಗ್ ಮತ್ತು ವಿದೇಶ ಪ್ರವಾಸಗಳ ಸಮಯದಲ್ಲಿ ಜಲಾಲುದ್ದೀನ್, ಡಿಪ್ಪಿ ಜತೆಯಲ್ಲಿ ಇರುತ್ತಾರೆ. ದೀಪಿಕಾ ತನ್ನ ಕೆಲವು ಸಂದರ್ಶನಗಳಲ್ಲಿ ಜಲಾಲ್ ಬಗ್ಗೆಯೂ ಮಾತನಾಡಿದ್ದಾರೆ. ಜಲಾಲ್ ಕೇವಲ ರಕ್ಷಕ ಮಾತ್ರವಲ್ಲ, ನಾನು ಸಂಪೂರ್ಣವಾಗಿ ನಂಬಬಹುದಾದ ವ್ಯಕ್ತಿ ಎಂದು ದೀಪಿಕಾ ಹೇಳಿದ್ದಾರೆ. ಹಾಗಾದರೆ ದೀಪಿಕಾ ಜೊತೆ ಯಾವಾಗಲೂ ಇರುವ ಈ ಅಂಗರಕ್ಷಕನ ಸಂಬಳ ಎಷ್ಟು ಗೊತ್ತಾ? ಗೊತ್ತಿಲ್ಲ ಅಂದರೆ, ಇಲ್ಲಿದೆ ಅಚ್ಚರಿಯ ಮಾಹಿತಿ.
2017 ರಿಂದ ದೀಪಿಕಾ, ಜಲಾಲ್‌ಗೆ ವರ್ಷಕ್ಕೆ 80 ಲಕ್ಷ ರೂ. ಸಂಬಳ ನೀಡುತ್ತಿದ್ದರು ಎಂದು ವರದಿಯಾಗಿದೆ. ಆದರೆ, ಈಗ 1.5 ಕೋಟಿ ರೂ. ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನು ದೀಪಿಕಾ ಆಗಲಿ ಜಲಾಲುದ್ದೀನ್ ಆಗಲಿ ಎಲ್ಲೂ ಹೇಳಿಲ್ಲ. ಆದರೆ, ಸಿನಿ ಮೂಲಗಳ ಪ್ರಕಾರ ಇಷ್ಟೊಂದು ಸಂಬಳ ನೀಡುತ್ತಿದ್ದಾರೆ ಎಂಬ ಮಾತಿದೆ. ಇನ್ನು ದೀಪಿಕಾ ಅವರಿಗೆ ಜಲಾಲುದ್ದೀನ್ ಜೊತೆ ವೃತ್ತಿಪರ ಸಂಬಂಧವನ್ನು ಮೀರಿದ ಸಂಬಂಧವಿದೆ. ಅದೇನೆಂದರೆ, ಜಲಾಲುದ್ದೀನ್ ಅವರನ್ನು ದೀಪಿಕಾ ತಮ್ಮ ಕುಟುಂಬದ ಸದಸ್ಯರಂತೆ ಕಾಣುತ್ತಾರೆ.
ದೀಪಿಕಾ ಅವರು ತಮ್ಮ ಅಂಗರಕ್ಷಕನನ್ನು ಸಹೋದರನಂತೆ ಪರಿಗಣಿಸುತ್ತಾರೆ. ಪ್ರತಿ ವರ್ಷ ರಕ್ಷಾ ಬಂಧನದಂದು ದೀಪಿಕಾ, ಅವರಿಗೆ ರಾಖಿ ಕಟ್ಟುತ್ತಾರೆ. ಗರ್ಭಿಣಿ ಸಮಯದಲ್ಲಿ ಜನಸಂದಣಿಯಿಂದ ದೀಪಿಕಾಳನ್ನು ಜಲಾಲ್ ಎಚ್ಚರಿಕೆಯಿಂದ ರಕ್ಷಿಸುತ್ತಿರುವ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಈಗಾಗಲೇ ವೈರಲ್ ಆಗಿವೆ. ಇನ್ನು 2018 ರಲ್ಲಿ ದೀಪಿಕಾ ಮತ್ತು ರಣವೀರ್ ಸಿಂಗ್ ಅವರ ವಿವಾಹದ ಸಮಯದಲ್ಲಿ ಜಲಾಲುದ್ದೀನ್ ಭದ್ರತಾ ಜವಾಬ್ದಾರಿಯನ್ನು ಹೊಂದಿದ್ದರು. ಈ ಕಾರಣಗಳಿಂದ ಜಲಾಲುದ್ದೀನ್ ಕೂಡ ಆಗಾಗ ಸಿನಿ ರಸಿಕರ ಗಮನ ಸೆಳೆಯುತ್ತಿರುತ್ತಾರೆ. (ಏಜೆನ್ಸೀಸ್)