ಟಾಲಿವುಡ್ನ ಖ್ಯಾತ ನಟಿ ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಬಹಳ ವರ್ಷಗಳ ನಂತರ ಅವರು ಮೀಸೆ ಬೋಳಿಸಿಕೊಂಡರು, ಹೊಸ ಲುಕ್ನಲ್ಲಿ ಕಂಗೊಳಿಸುತ್ತಿದ್ದರು.
ಇಷ್ಟಕ್ಕೂ ಚಿರಂಜೀವಿಗಾರು ಮೀಸೆ ಬೋಳಿಸಿಕೊಂಡಿದ್ದು ಯಾಕೆ? ಇಂಥದ್ದೊಂದು ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡದೇ ಬಿಡಲಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಆಗಸ್ಟ್ನಲ್ಲಿ ಚಿರಂಜೀವಿ ಅಭಿನಯದ 'ಆಚಾರ್ಯ' ಚಿತ್ರದ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಚಿತ್ರೀಕರಣ ಪ್ರಾರಂಭವಾಗುವಂತೆ ಕಾಣುತ್ತಿಲ್ಲ.
ಇದನ್ನೂ ಓದಿ: ಈ ವಿಷಯದಲ್ಲಿ ‘ಹಾಸ್ಯ ಚಕ್ರವರ್ತಿ’ಗಳೇ ಮುಂದು …
ಕೆಲವು ತಿಂಗಳ ಹಿಂದೆ, ಇದೇ ಚಿರಂಜೀವಿ ಅವರು ತೆಲುಗು ಚಿತ್ರರಂಗದ ಗಣ್ಯರ ಜತೆಗೆ ಹೋಗಿ ತೆಲಂಗಾಣ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಕೊಡಬೇಕು ಎಂದು ಕೇಳಿಕೊಂಡಿದ್ದರು. ಚಿರಂಜೀವಿಯಂತಹ ಹಿರಿಯ ನಟರೇ ಬಂದಿರುವಾಗ, ಒಂದು ಚಾನ್ಸ್ ನೋಡೋಣ ಎಂದು ಇಬ್ಬರೂ ಮುಖ್ಯಮಂತ್ರಿಗಳು ಚಿತ್ರೀಕರಣಕ್ಕೆ ಅನುಮತಿಯನ್ನೇನೋ ಕೊಟ್ಟಿದ್ದರು.
ಆಂಧ್ರ ಮತ್ತು ತೆಲಂಗಾಣದಲ್ಲಿ ಚಿತ್ರೀಕರಣ ಪ್ರಾರಂಭವಾದರೂ, ಎರಡೂ ರಾಜ್ಯಗಳಲ್ಲಿ ಕರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗಾಗಲೇ ಪ್ರತೀ ದಿನ ಪ್ರಕರಣ ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ, ಚಿತ್ರೀಕರಣ ಮಾಡುವುದಕ್ಕೆ ಬಹಳಷ್ಟು ಮಂದಿ ಹೆದರುತ್ತಿದ್ದಾರೆ. ಇದಕ್ಕೆ ಚಿರಂಜೀವಿ ಅವರ ಕುಟುಂಬ ಸಹ ಹೊರತಲ್ಲ. ಕರೊನಾ ಹಾವಳಿ ಕೊಂಚ ತಗ್ಗುವವರೆಗೂ ಚಿತ್ರೀಕರಣ ಬೇಡ ಎಂದು ಚಿರಂಜೀವಿ ನಿರ್ಧರಿಸಿದ್ದು, ಆಗಸ್ಟ್ನಿಂದ ಪ್ರಾರಂಭವಾಗಬೇಕಿದ್ದ ಕೆಲಸವನ್ನು ಮುಂದೂಡಿದ್ದಾರೆ.
ಒಂದು ಪಕ್ಷ ಆಗಸ್ಟ್ನಲ್ಲಿ 'ಆಚಾರ್ಯ' ಚಿತ್ರೀಕರಣ ಶುರುವಾಗಿದ್ದರೆ, ಕಂಟಿನ್ಯುಟಿಗಾಗಿ ಮೀಸೆ ಬಾಕಾಗುತಿತ್ತು. ಈಗ ಮುಂದಕ್ಕೆ ಹೋಗಿರುವುದರಿಂದ, ಸ್ವಲ್ಪ ದಿನ ಚೇಂಜ್ ಇರಲಿ ಎಂದು ಮೀಸೆ ಬೋಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೇಗೂ ಚಿತ್ರೀಕರಣ ಶುರುವಾಗುವುದಕ್ಕೆ ಒಂದೆರೆಡು ತಿಂಗಳುಗಳಾದರೂ ಬೇಕಾಗಿರುವುದರಿಂದ, ಅಷ್ಟರಲ್ಲಿ ಮೀಸೆ ಬೆಳೆದುಕೊಳ್ಳುತ್ತದೆ ಎಂಬ ಕಾರಣಕ್ಕೆ ಅವರು ಮೀಸೆ ಬೋಳಿಸಿಕೊಂಡಿದ್ದಾರೆ ಎಂದು ಹೇಳಾಗುತ್ತಿದೆ.
ಇದರ ಜತೆಗೆ ಇನ್ನೂ ಒಂದು ವಾದವಿದೆ. 'ಆಚಾರ್ಯ' ಚಿತ್ರದಲ್ಲಿ ಚಿರಂಜೀವಿ ಅವರ ಫ್ಲಾಶ್ಬ್ಯಾಕ್ ಎಪಿಸೋಡ್ಗೆ ಈ ತರಹದ ಮೀಸೆ ಇಲ್ಲದ ಒಂದು ಲುಕ್ ಬೇಕಾಗಿದ್ದು, ಮೀಸೆ ಇಲ್ಲದೆ ಹೇಗೆ ಕಾಣಿಸುತ್ತೀನಿ ಎಂದು ನೋಡುವುದಕ್ಕೆ ಚಿರಂಜೀವಿ ಮೀಸೆ ತೆಗೆದಿದ್ದಾರೆ ಎಂಬ ಮಾತಿದೆ.
ಒಟ್ಟಿನಲ್ಲಿ ಚಿರಂಜೀವಿ ಅವರು ಮೀಸೆ ತೆಗೆದಿದ್ದೇ ಒಂದು ದೊಡ್ಡ ಸುದ್ದಿಯಾಗಿದ್ದು, ಚಿತ್ರರಂಗ ಮತ್ತು ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವುದಂತೂ ಹೌದು.