ಬೆಂಗಳೂರು: ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಸಂಬಂಧಿ ಮನೋಜ್ಕುಮಾರ್, ‘ಟಕ್ಕರ್’ ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಬಹುತೇಕ ಸಿನಿಮಾ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ, ಬಿಡುಗಡೆಯ ತಯಾರಿಯಲ್ಲಿದೆ. ಹೀಗಿರುವಾಗಲೇ ಐಪಿಎಸ್ ಅಧಿಕಾರಿ ಡಿ. ರೂಪಾ ಚಿತ್ರತಂಡದ ಭಾಗವಾಗಿದ್ದಾರೆ. ಅಂದರೆ, ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿ ‘ಟಕ್ಕರ್’ ಬಳಗಕ್ಕೆ ಶುಭಕೋರಿದ್ದಾರೆ. ಹಾಗಾದರೆ ರೂಪಾ ಅವರಿಂದಲೇ ಹಾಡು ಬಿಡುಗಡೆ ಮಾಡಿಸಿದ್ದೇಕೆ? ಇದಕ್ಕೂ ಉತ್ತರ ಇದೆ.
ಇವತ್ತಿನ ಮೊಬೈಲ್ಫೋನ್ ಯುಗದಲ್ಲಿ ಮಹಿಳೆಯರು ಹೇಗೆಲ್ಲ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ ಎಂಬುದನ್ನು ಕಮರ್ಷಿಯಲ್ ಟಚ್ ಕೊಟ್ಟು ‘ಟಕ್ಕರ್’ ಸಿನಿಮಾ ಮಾಡಲಾಗಿದೆ. ಆ ಒಂದು ಕಾರಣಕ್ಕೆ ಮಹಿಳಾ ಪೊಲೀಸ್ ಅಧಿಕಾರಿ ಕಡೆಯಿಂದಲೇ ಈ ವಿಡಿಯೋ ಹಾಡನ್ನು ಬಿಡುಗಡೆ ಮಾಡಿಸಿದ್ದಾರೆ ನಿರ್ದೇಶಕ ವಿ.ರಘುಶಾಸ್ತ್ರಿ. ಅಷ್ಟೇ ಅಲ್ಲ ಚಿತ್ರದ ಟ್ರೇಲರ್ ಸಹ ನೋಡಿರುವ ಡಿ.ರೂಪಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆ.ಎನ್.ನಾಗೇಶ್ ಕೋಗಿಲು ನಿರ್ಮಾಣ ಮಾಡಿರುವ ಚಿತ್ರದಲ್ಲಿ ಮನೋಜ್ಗೆ ಜೋಡಿಯಾಗಿ ರಂಜನಿ ರಾಘವನ್ ನಾಯಕಿಯಾಗಿ ನಟಿಸಿದ್ದಾರೆ.
ಒಟ್ಟು 65 ದಿನಗಳ ಕಾಲ ಮೈಸೂರು, ಬೆಂಗಳೂರು ಮತ್ತು ಮಲೇಷ್ಯಾದಲ್ಲಿ ಚಿತ್ರೀಕರಿಸಲಾಗಿದೆ. ವಿಲನ್ ಆಗಿ ‘ಭಜರಂಗಿ’ ಸೌರವ್ ಲೋಕಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ, ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ಡಿಫರೆಂಟ್ ಡ್ಯಾನಿ ಸಾಹಸ, ವಿಲಿಯಮ್್ಸ ಡೇವಿಡ್ ಛಾಯಾಗ್ರಹಣ, ಪ್ರಕಾಶ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.